ಆ. 22-23ರವರೆಗೆ ಕಾರವಾರ-ಬೆಂಗಳೂರು ರೈಲು ಸಂಚಾರ ರದ್ದು
ಉಡುಪಿ, ಆ.10: ಮೈಸೂರು ವಿಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಇದರಿಂದ ಬೆಂಗಳೂರು ಮತ್ತು ಕಾರವಾರ ನಡುವೆ ಸಂಚರಿಸುವ ರಾತ್ರಿ ರೈಲಿನ ಸಂಚಾರವನ್ನು ಆ. 22ರವರೆಗೆ ಹಾಗೂ ಯಶವಂತಪುರ ಮತ್ತು ಕಾರವಾರ ನಡುವಿನ ಹಗಲು ರೈಲಿನ ಸಂಚಾರವನ್ನು ಆ. 23ರವರೆಗೆ ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಉಳಿದಂತೆ ಕೇರಳ ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಡೆಹ್ರಾಡೂನ್-ಕೊಚುವೇಲು ಎಕ್ಸ್‌ಪ್ರೆಸ್ ರೈಲು (22660) ಸಂಚಾರವನ್ನು ಆ.12ರಂದು ರದ್ದುಪಡಿಸಲಾಗಿದೆ. ಪುಣೆ-ಎರ್ನಾಕುಲಂ ಪೂರ್ಣ ಎಕ್ಸ್‌ಪ್ರೆಸ್ (22149) ರೈಲಿನ ಆ.13 ಮತ್ತು 16ರ ಸಂಚಾರವನ್ನು ರದ್ದುಪಡಿಸಲಾಗಿದೆ.
ಪುಣೆ-ಎರ್ನಾಕುಲಂ ಎಕ್ಸ್‌ಪ್ರೆಸ್ (22150) ರೈಲಿನ ಆ.14ರ ಸಂಚಾರವನ್ನು ರದ್ದುಪಡಿಸಲಾಗಿದೆ. ಚಂಡೀಗಢದಿಂದ ಕೊಚುವೇಲುಗೆ ಸಂಚರಿಸುವ (12218) ರೈಲಿನ ಆ.14ರ ಸಂಚಾರ ರದ್ದುಗೊಳಿಸಲಾಗಿದೆ. ಅದೇ ರೀತಿ ಕೊಚುವೇಲಿನಿಂದ ಚಂಡೀಗಢಕ್ಕೆ ಇಂದು ತೆರಳಬೇಕಿದ್ದ ರೈಲಿನ ಪ್ರಯಾಣವನ್ನು ರದ್ದುಪಡಿಸಲಾಗಿದೆ.
ತಿರುವನಂತಪುರದಿಂದ ನಿಝಾಮುದ್ದೀನ್‌ಗೆ ಇಂದು ತೆರಳಬೇಕಿದ್ದ (22653) ಎಕ್ಸ್‌ಪ್ರೆಸ್ ರೈಲಿನ ಸಂಚಾರ ರದ್ದುಗೊಳಿಸಿದ್ದು, ತಿರುವನಂತಪುರನಿಂದ ಕುರ್ಲಾ ಗೆ ತೆರಳಬೇಕಿದ್ದ ನೇತ್ರಾವತಿ ಎಕ್ಸ್‌ಪ್ರೆಸ್(16346)ನ ಪ್ರಯಾಣವನ್ನೂ ರದ್ದು ಪಡಿಸಲಾಗಿದೆ. ಅದೇ ರೀತಿ ಪುಣೆಯಿಂದ ಎರ್ನಾಕುಲಂಗೆ ತೆರಳಬೇಕಿದ್ದ ರೈಲು ಸಹ ರದ್ದಾಗಿದೆ.
ಆ.12ರಂದು ತೆರಳಬೇಕಿದ್ದ ಕುರ್ಲಾ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಹಾಗೂ ನಿಝಾಮುದ್ದೀನ್-ಎರ್ನಾಕುಲಂ ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.