ಉಡುಪಿ: ಕೋಡಿ, ಗಂಗೊಳ್ಳಿಯಲ್ಲಿ ಮುಂದುವರಿದ ಕಡಲ ಕೊರೆತ

Update: 2019-08-10 16:16 GMT

ಉಡುಪಿ, ಆ.10: ರಾಜ್ಯದ ವಿವಿದೆಡೆಗಳಲ್ಲಿ ಕಂಡುಬಂದಿರುವ ಭೀಕರವಾದ ನೆರೆ ಪರಿಸ್ಥಿತಿ ಉಡುಪಿ ಜಿಲ್ಲೆಯಲ್ಲಿ ಕಂಡು ಬರದಿದ್ದರೂ, ಜಿಲ್ಲೆಯಲ್ಲಿ ಗಾಳಿ- ಮಳೆಯಿಂದ ಮನೆಗಳ ಕುಸಿತ, ಹಾನಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಅದೇ ರೀತಿ ಕುಂದಾಪುರ ತಾಲೂಕಿನ ಕೋಡಿ ಮತ್ತು ಗಂಗೊಳ್ಳಿಗಳಲ್ಲಿ ಕಡಲು ಕೊರೆತ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.

ಕುಂದಾಪುರದಲ್ಲಿ ಇಂದು ಮೂರು ಮನೆಗಳಿಗೆ ಮಾತ್ರ ಹಾನಿಯಾದ ವರದಿಗಳು ಬಂದಿದ್ದು, ಉಳಿದಂತೆ ಕೋಡಿ ಮತ್ತು ಗಂಗೊಳ್ಳಿಯಲ್ಲಿ ಕಡಲ ಕೊರೆತ ಮುಂದುವರಿದಿದೆ. ಆದರೆ ಇದರಿಂದ ತೆಂಗಿನ ಮರಗಳಿಗಾಗಲೀ, ಮನೆಗಳಿಗಾಗಲೀ ಯಾವುದೇ ಅಪಾಯವಾಗಿಲ್ಲ ಎಂದು ಕುಂದಾಪುರದ ತಹಶೀಲ್ದಾರ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

 ಚಕ್ರಾ ನದಿಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುವ ಸಾಧ್ಯತೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿರುವ ಕುರಿತು ಪ್ರಶ್ನಿಸಿದಾಗ, ವಾರಾಹಿ ಹಾಗೂ ಚಕ್ರಾ ನದಿಗಳಿಗೆ ನೀರು ಬಿಡುವ ಕುರಿತಂತೆ ಅಲ್ಲಿನ ಇಂಜಿನಿಯರ್‌ ಗಳೊಂದಿಗೆ ಮಾತನಾಡಿದ್ದು, ಅಂಥಾ ಸಾಧ್ಯತೆ ಇದ್ದರೆ, ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬೈಂದೂರು ತಾಲೂಕಿನಲ್ಲಿ ಇಂದು ಎಂಟು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಬಿಜೂರು ಗ್ರಾಮದ ರಮೇಶ್ ಪೂಜಾರಿ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು 1.5 ಲಕ್ಷ ರೂ. ನಷ್ಟವಾಗಿದೆ. ಹೆರೂರು ಗ್ರಾಮದ ಕೃಷ್ಣ ನಾಯ್ಕರ ಮನೆಗೆ 22ಸಾವಿರ, ಶೀನಾ ನಾಯ್ಕರ ಮನೆಗೆ 24ಸಾವಿರ, ನಾವುಂದ ಗ್ರಾಮದ ಸಾಕು ಅವರ ತೋಟಕ್ಕೆ 15 ಸಾವಿರ, ಗುಡ್ಡಮ್ಮ ಶೆಡ್ತಿ ಅವರ ಮನೆಗೆ, ಹಡವು ಗ್ರಾಮದ ಕೃಷ್ಣಮೂರ್ತಿ ಉಡುಪರ ಮನೆಗೆ 20ಸಾವಿರ, ನಾಡದ ಖಾದರ್ ಅವರ ಮನೆಗೆ ಆರು ಸಾವಿರ ರೂ., ನಾವುಂದ ಸಿಂಗಾರಿ ಶೆಡ್ತಿ ತೋಟ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.

ಕುಂದಾಪುರದಲ್ಲಿ ಕೋಣಿ ನಾಗಪ್ಪ ಪೂಜಾರಿ ಪಕ್ಕಾ ಮನೆಗೆ ಭಾಗಶ: ಹಾನಿಯಾಗಿ 40 ಸಾವಿರ, ಹಂಗಳೂರಿನ ಕೃಷ್ಣ ದೇವಾಡಿಗ ಮನೆಗೆ 20ಸಾವಿರ, ಹೊಂಬಾಡಿ ಮಂಡಾಡಿಯ ಸುಮನ ಶೆಟ್ಟಿ ಅವರ ತೋಟಗಾರಿಕಾ ಬೆಳೆಗಳಿಗೆ 25,000ರೂ. ನಷ್ಟವಾದ ಬಗ್ಗೆ ವರದಿಗಳು ಬಂದಿವೆ.

ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ವೆಂಕಟ ನಾಯ್ಕರ ಮನೆಗೆ 20ಸಾವಿರ, ಬನ್ನಂಜಿಯ ಆನಂದ ಶೆಟ್ಟಿ ಅವರ ಮನೆ ಸಂಪೂರ್ಣ ಹಾನಿಗೊಂಡಿದ್ದು ಎರಡು ಲಕ್ಷ ರೂ., ಚೇರ್ಕಾಡಿ ಗ್ರಾಮದ ಮಾಲತಿ ಅವರ ಮನೆಗೆ 10 ಸಾವಿರ, ಸದಾನಂದ ಶೆಟ್ಟಿ ಅವರ ಮನೆಗೆ 10 ಸಾವಿರ ರೂ. ನಷ್ಟವಾಗಿದೆ.

 ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ವಿಠಲ ಶೆಟ್ಟಿ ಅವರ ತೋಟದ 45 ಅಡಿಕೆ, 250 ಬಾಳೆ ಗಿಡಗಳನ್ನು ಹಾನಿಗೊಂಡಿದ್ದು 50,000ರೂ.ನಷ್ಟ ವಾಗಿದೆ.ಕಾಂತಾವರ ಮರುತಗುಡ್ಡೆಯ ಗಿರೀಶ ಪೂಜಾರಿ ಅವರ ಅಂಗಡಿ ಮೇಲ್ಚಾವಣಿ ಹಾರಿಹೋಗಿ 10ಸಾವಿರ, ಅದೇ ಗ್ರಾಮದ ಲೀಲಾ ನಾಯ್ಕ, ಸುಂದರ ನಲ್ಕೆ, ಹಾಗೂ ಯಾದವ ನಲ್ಕೆ ಅವರ ಮನೆಗೆ ತಲಾ 10,000ರೂ., ಕಾಂತಾವರ ಬೇಲಾಡಿ ಹೊಸಮನೆಯ ಜಯಶ್ರೀ ಭಟ್ ಅವರ ಮನೆಗೆ 20 ಸಾವಿರ ಹಾಗೂ ನಂದಳಿಕೆ ಗ್ರಾಮದ ವಸಂತ ಶೆಟ್ಟಿ ಅವರ ಮನೆಗೆ 30 ಸಾವಿರ ರೂ. ನಷ್ಟವಾದ ಬಗ್ಗೆ ಅಂದಾಜು ಮಾಡಲಾಗಿದೆ ಎಂದು ತಾಲೂಕು ಕಚೇರಿ ಮಾಹಿತಿ ನೀಡಿದೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿಯಂತ್ರಣ ಕಚೇರಿಗೆ ಬಂದ ಮಾಹಿತಿಯಂತೆ ಜಿಲ್ಲೆಯಲ್ಲಿ 28 ಪ್ರಕರಣಗಳಲ್ಲಿ ಐದು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ. ಬೈಂದೂರಿನ ಶಿರೂರು ಗ್ರಾಮದ ತಿಮ್ಮ ಆಚಾರಿ ಮನೆಗೆ 50 ಸಾವಿರ, ಬ್ರಹ್ಮಾವರದ ಚಿತ್ರವಾಡಿ ಗ್ರಾಮದ ರತ್ನ ನಾಯರಿ, ಹಲುವಳ್ಳಿ ಗ್ರಾಮದ ಕಮಲ ಪೂಜಾರ್ತಿ ಮನೆಗೆ ತಲಾ 20 ಸಾವಿರ ರೂ.ನಷ್ಟ ಸಂಭವಿಸಿದೆ.

ಇನ್ನು ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೂಡ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಮರಬಿದ್ದು ಏಳು ಲಕ್ಷ ರೂ. ನಷ್ಟ ಉಂಟಾಗಿದೆ. ಅಂಜಾರು ಗ್ರಾಮದ ಗಿರಿಜಮ್ಮ ಶೆಡ್ತಿ ಮನೆಗೆ 50 ಸಾವಿರ, ಅದೇ ಗ್ರಾಮದ ಸುಫಲ ಶೆಟ್ಟಿ ಮನೆಗೆ 40 ಸಾವಿರ, ಆನಗಳ್ಳಿ ಗ್ರಾಮದ ಭಾರತಿ ಶೆಟ್ಟಿ ಮನೆಗೆ 50 ಸಾವಿರ, ಬಳ್ಕೂರು ಗ್ರಾಮದ ಸುಚಿತ್ರ ಅವರ ಮನೆಗೆ 50 ಸಾವಿರ ನಷ್ಟವಾಗಿದೆ.

ಇನ್ನು ಕಾರ್ಕಳ ತಾಲೂಕು ಮುಡಾರು ಗ್ರಾಮದ ವನಿತಾ ಶೆಟ್ಟಿ ಅವರ ಮನೆಗೆ ಎರಡು ಲಕ್ಷ ರೂ. ಹಾನಿ ಸಂಭವಿಸಿದೆ. ಅದೇ ರೀತಿ ಈದು ಗ್ರಾಮದ ಗಣೇಶ್ ಗೋಡಬೋಲೆ ಅವರ ಗಾಳಿ ಮಳೆಯಿಂದ 1.20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ತೋಟದ ಬೆಳೆಗಳಿಗೆ ಹಾಗೂ ಕೃಷಿ ಬೆಳೆಗಳಿಗೆ ಹಾನಿಯಾದ 14 ಪ್ರಕರಣಗಳು ವರದಿಯಾಗಿದ್ದು ಇದರಿಂದ ಒಟ್ಟು ಸುಮಾರು 2.50 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪು ತಾಲೂಕಿನಿಂದ 12 ಹಾಗೂ ಕಾರ್ಕಳ ತಾಲೂಕಿನಿಂದ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೇಂದ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News