ಇತಿಹಾಸದ ಜ್ಞಾನ ಇಲ್ಲದಿದ್ದರೆ ಸಮಾಜ ವಿಭಜನೆ: ಪ್ರೊ.ಎ.ಎಂ.ಖಾನ್

Update: 2019-08-10 16:17 GMT

ಶಿರ್ವ, ಆ.10: ಇತಿಹಾಸ ಮತ್ತು ಪರಂಪರೆಯ ಜ್ಞಾನ ಇಲ್ಲದ ಸಮಾಜವು ನೈತಿಕ ವೌಲ್ಯಗಳ ಕೊರತೆಯಿಂದಾಗಿ ವಿಭಜನೆಗೆ ಕಾರಣವಾಗುವ ಅಪಾಯ ಇದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಎ.ಎಂ. ಖಾನ್ ಹೇಳಿದ್ದಾರೆ.

 ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗ ಹಾಗೂ ವಿವಿಯ ಇತಿಹಾಸ ಉಪನ್ಯಾಸಕರ ಸಂಘಟನೆ ಮಂಜುಷಾ ಇದರ ವತಿಯಿಂದ ‘ದಿ ಹಿಸ್ಟರಿ ಆಂಡ್ ಕಲ್ಚರ್ ಆ್ ಸೌತ್ ಇಂಡಿಯಾ’ ಎಂಬ ವಿಷಯದ ಕುರಿತು ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇತಿಹಾಸ ಮತ್ತು ಇತಿಹಾಸಜ್ಞರು ಸಮಾಜದ ದಾರಿದೀಪಗಳು. ಇತಿಹಾಸ ತೋರಿಸಿ ಕೊಡುವ ದಾರಿಯಲ್ಲಿ ನಡೆಯುವ ಸಮಾಜ ಸದಾ ಆರೋಗ್ಯ ಪೂರ್ಣವಾಗಿರುತ್ತದೆ. ಇತಿಹಾಸದಿಂದ ಬಳವಳಿಯಾಗಿ ಬಂದಿರುವ ವೌಲ್ಯ ಗಳು ವಿವಿಧ ಸಮುದಾಯಗಳಿರುವ ಒಂದು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಇತಿಹಾಸ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಮುಂದ ಕ್ಕೊಯ್ಯವ ಜವಾಬ್ದಾರಿ ವಹಿಸಬೇಕು ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ, ದೇಶದಲ್ಲಿ ಈವರೆಗೆ 321 ವಿಶ್ವ ಪಾರಂಪರಿಕ ತಾಣಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವುದಾಗಿ ಸರಕಾರವೇ ಇತ್ತೀಚೆಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಉತ್ತರ ಪ್ರದೇಶದಲ್ಲಿ 75, ತಮಿಳುನಾಡಿನಲ್ಲಿ 74, ಕರ್ನಾಟಕದಲ್ಲಿ 48 ತಾಣಗಳು ರಾಜಕಾರಣಿಗಳು ಮತ್ತು ಪ್ರಭಾವವಿ ಗಳಿಂದ ಒತ್ತುವರಿಯಾಗಿ ನಾಶವಾಗುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದರು.

ಸರಕಾರ ಇಂತಹ ತಾಣಗಳ ಸಂರಕ್ಷಣೆಗೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಕಳವಳಕಾರಿ ಬೆಳವಣಿಗೆಯಾಗಿದೆ. ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ವಿವಿಗಳ ಆದ್ಯತೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಗಳಲ್ಲಿ ಜವಾಬ್ದಾರಿಯ ಹುದ್ದೆಗಳನ್ನು ಅಲಂಕರಿಸುವವರು ವಿಧ್ವತ್ತಿನೊಂದಿಗೆ ಉತ್ತಮ ಆಡಳಿತ ಜ್ಞಾನವನ್ನು ಹೊಂದಿರುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಗೋವಾ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ನಾಗೇಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ.ನಯನಾ ಎಂ.ಪಕ್ಕಳ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ. ಮುರುಗೇಶ್ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಷಾದ ಉಪಾಧ್ಯಕ್ಷ ಪ್ರೊ.ಸುರೇಶ್ ರೈ ವಂದಿಸಿದರು. ಕಾಲೇಜಿನ ಉಪನ್ಯಾಸಕಿ ಪ್ರೊ. ಹೇಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News