ಉಡುಪಿ: ದಲಿತರ ಕುಂದುಕೊರತೆ ಸಭೆಯಲ್ಲಿ ಡಿಸಿ ವಿರುದ್ಧ ಮುಖಂಡರ ಆಕ್ರೋಶ

Update: 2019-08-10 16:21 GMT

ಉಡುಪಿ, ಆ.10: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ನೆಪವೊಡ್ಡಿ ಅಂಬೇಡ್ಕರ್ ಜಯಂತಿ ರ್ಯಾಲಿಗೆ ಅವಕಾಶ ನೀಡದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವಿರುದ್ಧ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡದ ಕುರಿತು ದಲಿತ ಮುಖಂಡರು ಪ್ರಶ್ನಿಸಿದರು. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಅಂಬೇಡ್ಕರ್ ಜಯಂತಿಯ ರ್ಯಾಲಿಗೆ ಅನುಮತಿ ನೀಡಿ ರುವಾಗ ಉಡುಪಿ ಜಿಲ್ಲೆಯಲ್ಲಿ ಮಾತ್ರ ಚುನಾವಣಾ ನೀತಿ ಸಂಹಿತೆ ಜಾರಿಯ ನೆಪ ಹೇಳಿ ಅನುಮತಿ ನಿರಾಕರಿಸಿರುವುದು ಸರಿಯಲ್ಲ ಎಂದು ದೂರ ಲಾಯಿತು.

ನಂತರ ಅದೇ ನೀತಿ ಸಂಹಿತೆ ಹಾಗೂ ಸೆಕ್ಷನ್ 144 ಜಾರಿಯಲ್ಲಿರುವ ಸಂದರ್ಭ ಚುನಾವಣೆಯಲ್ಲಿ ಗೆದ್ದ ಸಂಸದರು ಮತ್ತು ಕಾರ್ಯಕರ್ತರಿಗೆ ವಿಜಯೋತ್ಸವ ಹಾಗೂ ರ್ಯಾಲಿ ನಡೆಸಲು ಹೇಗೆ ಅವಕಾಶ ನೀಡಲಾಯಿತು. ಅವರಿಗೊಂದು ನ್ಯಾಯ ದಲಿತರಿಗೊಂದು ನ್ಯಾಯವೇ ಎಂದು ದಲಿತ ಮುಖಂಡರು ಸಭೆಯಲ್ಲಿ ಪ್ರಶ್ನಿಸಿದರು.

ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಕಾರಣ ನೀಡಿ ದಲಿತ ನೌಕರ ಸುಂದರ ಮಾಸ್ತರ್ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿರುವ ಕ್ರಮವನ್ನು ಖಂಡಿಸಲಾಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯ ಕ್ರಮಕ್ಕೆ ಒಂದು ರಾಷ್ಟ್ರೀಯ ಪಕ್ಷದ ಜಿಲ್ಲಾಧ್ಯಕ್ಷರನ್ನು ವೇದಿಕೆಗೆ ಆಹ್ವಾನಿಸಿರುವ ಬಗ್ಗೆ ದೂರಲಾಯಿತು.

ದಲಿತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಅದೇ ರೀತಿ ದಲಿತ ಮುಖಂಡರ ಫೋನ್ ಕರೆಗೆ ಸ್ಪಂದಿಸದ ಎಸ್ಪಿ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ದಲಿತ ಮುಖಂಡರಾದ ಸುಂದರ ಮಾಸ್ತರ್, ಜಯನ್ ಮಲ್ಪೆ, ಉದಯ ಕುಮಾರ್ ತಲ್ಲೂರು, ಶ್ಯಾಮರಾಜ್ ಬಿರ್ತಿ, ವಿಶ್ವನಾಥ್ ಪೇತ್ರಿ, ಸುಂದರ್ ಕಪ್ಪೆಟ್ಟು, ಶೇಖರ ಹಾವಂಜೆ, ವಾಸುದೇವ ಮುದೂರು , ಗೋಪಾಲ ಕೃಷ್ಣ ಕುಂದಾಪುರ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News