ಸರ್ವಾಧಿಕಾರಿಗಳ ಹಿಡಿತದಿಂದ ಲೇಖಕರು ಹೊರಬರಬೇಕು: ಡಾ.ನರಹಳ್ಳಿ ಬಾಲಸುಬ್ರಮಣ್ಯ

Update: 2019-08-10 16:49 GMT

ಬೆಂಗಳೂರು, ಆ 10: ಇಂದಿನ ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಸ್ವಾಯತ್ತ ಪ್ರಜ್ಞೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಸರ್ವಾಧಿಕಾರಿಗಳ ಹಿಡಿತದಿಂದ ಹೊರಬರಬೇಕಿದೆ ಎಂದು ಸಾಹಿತಿ ಹಾಗೂ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಹೇಳಿದ್ದಾರೆ.

ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಭಿನವ ಪ್ರಕಾಶನದ 25 ನೇ ಬೆಳ್ಳಿ ಬೆಳಕು ಸಂಭ್ರಮಾಚರಣೆಯ ಸಂಬಂಧ ಕನ್ನಡ ಜನಶಕ್ತಿ ಕೇಂದ್ರ ಹಾಗೂ ನರಹಳ್ಳಿ ಅಭಿಮಾನಿಗಳ ಬಳಗ ವತಿಯಿಂದ ಆಯೋಜಿಸಿದ್ದ ಬೆಳ್ಳಿ ಬೆಡಗು ಮಾಲಿಕೆಯ ಎರಡು ಕಂತಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲೇಖಕರು ನಿಬಂಧನೆ, ಒತ್ತಡಕ್ಕೆ ಒಳಗಾಗದೆ ಸ್ವಾಯತ್ತ ಪ್ರಜ್ಞೆ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಇಂದಿನ ಲೇಖಕರ ಸ್ವಾಯತ್ತ ಪ್ರಜ್ಞೆಯನ್ನು ಇನ್ಯಾರೋ ನಿಯಂತ್ರಿಸುವಂತಾಗಿದೆ. ಲೇಖಕರಿಗೆ ನಿಬಂಧನೆ, ಒತ್ತಡ ಹೇರಲಾಗುತ್ತಿದೆ. ಇದರಿಂದ ಹೊರಬರುವ ಮೂಲಕ ಸ್ವಂತ ಆಲೋಚನೆಯಿಂದ ಸಾಹಿತ್ಯ ರಚಿಸುವಂತಾಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಮ್ಮ ನಡುವೆ ಒಟ್ಟಾಗಿ ಓದುವ ಪದ್ಧತಿಯೇ ಮರೆಯಾಗಿದೆ. ವಸಾಹತುಶಾಹಿಯ ಪರಿಣಾಮದಿಂದಾಗಿ ನಮ್ಮಲ್ಲಿನ ಓದುವ ಪದ್ಧತಿ, ಪರಂಪರೆಯನ್ನು ನಾಶ ಮಾಡಿದೆ. ಆಧುನಿಕತೆ ಹಾಗೂ ಪರಂಪರೆಯ ನಡುವೆ ಸಹ್ಯವಾಗಲೇ ಇಲ್ಲ. ಕುವೆಂಪು, ದ.ರಾ.ಬೇಂದ್ರೆ ಅವರ ಜೊತೆಗೆ ಹರಿಹರ, ಪಂಪ, ರಾಘವಾಂಕರನ್ನು ಒಳಗೊಂಡು ಓದುವ ಪ್ರಯತ್ನಗಳೇ ನಡೆಯ ಲಿಲ್ಲ. ಹೀಗಾಗಿ, ನಮಗೆ ಪಸ್ತುತ ಸಮಗ್ರ ಓದು ಅಗತ್ಯವಿದೆ ಎಂದು ಹೇಳಿದರು.

ಇಪ್ಪತ್ತನೆಯ ಶತಮಾನ ಅನೇಕ ಪ್ರಬುದ್ಧ ಲೇಖಕರನ್ನು ಕಂಡಿದೆ. ನವ್ಯ ಕಾವ್ಯಗಳ ಮೂಲಕ ಸಾತ್ಯ ಲೋಕಕ್ಕೆ ಮೆರಗು ತಂದುಕೊಟ್ಟ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಅನಕೃ, ಶಿವರುದ್ರಪ್ಪ ಸೇರಿದಂತೆ ಅನೇಕ ಲೇಖಕರು ಹಾಗೂ ಸಾತಿಗಳು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಪರಂಪರೆಯ ಇತಿಹಾಸವನ್ನು ತಮ್ಮ ಕೃತಿಗಳ ಮೂಲಕ ನೀಡಿ ಕನ್ನಡ ಸಾಹಿತ್ಯ ಲೋಕ ಉಜ್ವಲವಾಗಿ ಬೆಳಗಲು ಕಾರಣೀಭೂತರಾಗಿದ್ದಾರೆ ಎಂದು ಬಣ್ಣಿಸಿದರು.

ಕುವೆಂಪು ಅವರನ್ನು ಸಮಗ್ರವಾಗಿ ನೋಡುವ ಮೊದಲ ಪ್ರಯತ್ನವನ್ನು ನನ್ನ ಕೃತಿಯ ಮೂಲಕ ಮಾಡಿದ್ದೇನೆ. ಸಾಹಿತ್ಯಿಕವಾಗಿ ಅಲ್ಲದೆ, ಸಾಂಸ್ಕತಿಕವಾಗಿ ಮಹತ್ವದ ಲೇಖಕರು ಅವರು, ಕನ್ನಡಕ್ಕೆ ನವೋದಯವನ್ನು ತಂದವರು. ಅವರನ್ನು ಬಿಡಿಬಿಡಿಯಾಗಿ ಓದದೇ, ಇಡಿಯಾಗಿ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿರುವುದು ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್ ಚಂದ್ರಿಕಾ ಅವರ ‘ಮೋದಾಳಿ’ ನಾಟಕ ಕುರಿತು ಮಾತನಾಡಿ, ದೇಶದಲ್ಲಿ ಮಹಿಳೆಯರ ಶೋಷಣೆ ನಿರಂತರವಾಗಿ ನಡೆಯುತ್ತಲೇ ಬಂದಿದ್ದು, ಇಂದಿಗೂ ಅದು ಮುಂದುವರಿದಿದೆ. ಇಂದೂ ಮಹಿಳೆಯು ಸಮಾನತೆ ಸಾಧಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ವ್ಯವಸ್ಥಿತವಾಗಿ ಅವರನ್ನು ಶಿಕ್ಷಣದಿಂದ ದೂರವಿಟ್ಟಿದ್ದರು.

ಈ ವೇಳೆ ಚಂದ್ರಿಕಾ ಅವರ ಮೋದಾಳಿ ನಾಟಕ ಹನ್ನೊಂದನೇ ಶತಮಾನದ ಜೈನ ಪುರಾಣದ ವಡ್ಡಾರಾಧನೆಯ ಒಂದು ಎಳೆ. ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯ ಶೋಷಣೆಯ ಬಗ್ಗೆ ನಾಟಕದಲ್ಲಿ ಸಮಗ್ರವಾಗಿ ಬಿಂಬಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ಬಾ ಕುವೆಂಪು ದರ್ಶನಕ್ಕೆ’, ಡಾ.ಪಿ.ಚಂದ್ರಿಕಾ ಅವರ ‘ಮೋದಾಳಿ’ ಮತ್ತು ಡಾ.ಓ.ಎಲ್.ನಾಗಭೂಷಣಸ್ವಾಮಿ ಅವರ ‘ಮುಗ್ಧ ಪ್ರಬುದ್ಧ’ ಅನುವಾದ ಕೃತಿಯನ್ನು ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News