ಮುಂದುವರಿದ ಮಳೆ: ಉಳ್ಳಾಲ ನಗರ ಪ್ರದೇಶ ಜಲಾವೃತ್ತ

Update: 2019-08-10 17:12 GMT

ಉಳ್ಳಾಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಳ್ಳಾಲ ನಗರಸಭ ವ್ಯಾಪ್ತಿಯ ಹಲವು ಮನೆಗಳು ಜಲಾವೃತ್ತವಾಗಿದ್ದು, ನೀರು ಮನೆಯೊಳಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ನಗರ ಸಭಾ ವ್ಯಾಪ್ತಿಯ ಕಲ್ಲಾಪು, ಉಳಿಯ, ಮಂಚಿಲ, ಪಾಂಡೆಲ್‍ಪಕ್ಕ, , ಬಂಡಿಕೊಟ್ಯ ಸೇರಿದಂತೆ ಕೆಲವು ಕಡೆಗಳಲ್ಲಿ ಒಟ್ಟು 150ಕ್ಕೂ ಅಧಿಕ ಮನೆಗಳು ಜಲಾವೃತ್ತವಾಗಿದ್ದು, ಇದರಲ್ಲಿ 30 ಮನೆಗಳು ಅಪಾಯಮಟ್ಟದಲ್ಲಿವೆ. ಈಗಾಗಲೇ 150 ಮನೆಗಳಲ್ಲಿ ವಾಸವಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಈ ಪೈಕಿ ಬಹಳಷ್ಟು ಕುಟುಂಬಗಳು ಅವರವರ ಕುಟುಂಬಸ್ಥರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಮನೆ ಅಪಾಯಮಟ್ಟದಲ್ಲಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡ  ಕುಟುಂಬಗಳಿಗೆ ಈಗಾಗಲೇ   ಮೂರು ಕಡೆ ಗಂಜಿ  ಕೇಂದ್ರವನ್ನು ತೆರೆಯಲಾಗಿದೆ.

ಉಳ್ಳಾಲದಲ್ಲಿರುವ ಶಾರದಾನಿಕೇತನ, ಉಳ್ಳಾಲ ದರ್ಗಾ ಮತ್ತು ಪೆರ್ಮನ್ನೂರು ಚರ್ಚ್ ನಲ್ಲಿ ಅವರ ಅನುಮತಿ ಪಡೆದು ಸರಕಾರದ ವತಿಯಿಂದ ಗಂಜಿ ಕೇಂದ್ರ ತೆರೆಯಲಾಗಿದೆ. ಆಯಾ ವಾರ್ಡ್‍ನಲ್ಲಿ ಅತಂತ್ರ  ಸ್ಥಿತಿಯಲ್ಲಿರುವ ಕುಟುಂಬಗಳಿಗೆ  ಗಂಜಿ ವ್ಯವಸ್ಥೆ ಮಾಡಲು  ಆಯಾ ವಾರ್ಡ್‍ನ ಕೌನ್ಸಿಲರ್‍ಗೆ ಜವಾಬ್ದಾರಿ ಕೊಡಲಾಗಿದೆ. ಜಲಾವೃತ್ತಗೊಂಡಿರುವ ಮನೆಗಳಲ್ಲಿ ಉಳಕೊಂಡಿರುವ ಕುಟುಂಬಗಳಿಗೆ ಹೊರಗಡೆ ಹೋಗಲು ದೋಣಿ ವ್ಯವಸ್ಥೆ ಮಾಡಲಾಗಿದೆ.

ಸುಮಾರು 150ಕ್ಕೂ ಅಧಿಕ ಮನೆಗಳಿಗೆ  ಹಾನಿಯಾಗಿದ್ದು, ಈ ಬಗ್ಗೆ ನೀರಿನ ಮಟ್ಟ ಕಡಿಮೆಯಾದ ಮೇಲೆ ಪರಿಶೀಲನೆ ಮಾಡಿ ಹಾಣಿಗೊಳಗಾದ ಮನೆಗಳ ಮತ್ತು ಅಂದಾಜು ನಷ್ಟದ ಬಗ್ಗೆ ತಹಶೀಲ್ದಾರ್‍ಗೆ ವರದಿ ಸಲ್ಲಿಸಲಾಗುವುದು ಎಂದು ಉಳ್ಳಾಲ ನಗರಸಭಾ ಗ್ರಾಮಕರಣಿಕ ಪ್ರಮೋದ್ ಪತ್ರಿಕೆಗೆ ತಿಳಿಸಿದ್ದಾರೆ. 

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಶಾಸಕ ಖಾದರ್, ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೊಂದರೆಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ವ್ಯವಸ್ಥೆ ಆಗಬೇಕಿದ್ದು, ಇದಕ್ಕಾಗಿ ಕ್ರಮ ಕೈಕೊಳ್ಳಬೇಕಾಗಿದೆ. ತೊಂದರೆಗೊಳಗಾದ ಕುಟುಂಬಗಳ ವರದಿ ಶೀಘ್ರ ನೀಡಿದಲ್ಲಿ ಪರಿಹಾರ  ಶೀಘ್ರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸೋಮೇಶ್ವರ ಪುರಸಭೆ

ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಕಡಲ್ಕೊರೆತ ಮತ್ತೆ ತೀವ್ರತೆ ಪಡೆದಿದೆ. ಉಚ್ಚಿಲ ಬೆಟ್ಟಪಾಡಿಯಲ್ಲಿ ಕಡಲ್ಕೊರೆತ ತೀವ್ರತೆ ಪಡೆದ ಕಾರಣ ಸಮುದ್ರದ ಸಮೀಪ ಇದ್ದ ವಿದ್ಯುತ್ ಕಂಬಗಳನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಡಲ್ಕೊರೆತದಿಂದ ಯಾವುದೇ ಅಪಾಯ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ವಿದ್ಯುತ್ ಕಂಬ ತೆರವುಗೊಳಿಸಲು ಮೆಸ್ಕಾಂಗೆ ಸೋಮೇಶ್ವರ ಪುರಸಭೆ ಸೂಚಿಸಿದ್ದು, ಹಿನ್ನೆಲೆಯಲ್ಲಿ ರಸ್ತೆಯ ಇನ್ನೊಂದು  ಬದಿಗೆ ಪರವಾನಿಗೆ ಪಡೆದು ಸ್ಥಳಾಂತರ ಮಾಡುವ ವ್ಯವಸ್ಥೆ ಆಗಿದೆ. ತೊಂದರೆಗೊಳಗಾದ ಕುಟುಂಬದವರಿಗೆ ಸ್ಥಳಾಂತರಗೊಳ್ಳಲು ಇನ್ನೊಂದು ಕಡೆ ಮನೆ ವ್ಯವಸ್ಥೆ ಇದ್ದು, ಅಗತ್ಯ ಬಂದಲ್ಲಿ ಸ್ಥಳಾಂತರಗೊಳಿಸಲು ನಿರ್ಧರಿಸಿದೆ.

ಕಡಲ್ಕೊರೆತದಿಂದ ತೊಂದರೆಗೊಳಗಾದ ಕುಟುಂಬಗಳಿಗೆ, ಮನೆಯಿಂದ ಸುರಕ್ಷಿತ ಜಾಗಕ್ಕೆ ತೆರಳಿದ ಕುಟುಂಬಸ್ಥರಿಗೆ ಬೋವಿಕಾನ ಶಾಲೆಯಲ್ಲಿ ಗಂಜಿ  ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಹಾನಿಗೊಳಗಾದ ಕುಟುಂಬದ ಮನೆಗಳನ್ನು ಗುರುತಿಸಿ ಈ ಬಗ್ಗೆ ವರದಿ ಸಂಗ್ರಹಿಸಿ ತಹಶೀಲ್ದಾರರಿಗೆ ಒಪ್ಪಿಸಿ  ಆ ಕುಟುಂಬಗಳಿಗೆ ಪರಿಹಾರ ಒದಗಿಸುವ ಬಗ್ಗೆ ಸೋಮೇಶ್ವರ ಪರಸಭೆ ಕ್ರಮ ಕೈಗೊಂಡಿದೆ.

ಕೋಟೆಕಾರ್ ಪಟ್ಟಣ ಪಂಚಾಯತ್

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಳ್ಳುಗುಡ್ಡೆ ಎಂಬಲ್ಲಿ ಬಶೀರ್ ಎಂಬವರ ಮನೆ ಜಲಾವೃತ್ತವಾಗಿದ್ದು, ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಮತ್ತು ಮುಖ್ಯಾಧಿಕಾರಿ ಪೂರ್ಣ ಕಲಾ ವೈ.ಕೆ. ಮತ್ತು ಸದಸ್ಯರು ಭೇಟಿ ನೀಡಿ ಮನೆಯ ಸುತ್ತ ತುಂಬಿದ ನೀರನ್ನು  ಚರಂಡಿ ಮೂಲಕ ಹೊರಗೆ ಹೋಗುವಂತೆ ಮಾಡಿ ಮನೆ ಮತ್ತು ಕುಟುಂಬವನ್ನು ರಕ್ಷಿಸಿದ್ದಾರೆ. ಅಲ್ಲದೇ ತುಂಬಿದ ನೀರು ಮುಳ್ಳುಗುಡ್ಡೆಯಲ್ಲಿ ರಸ್ತೆಯಲ್ಲೇ ಹರಿದು ಹೋದ ಪರಿಣಾಮ ರಸ್ತೆ ಸಂಪೂರ್ಣ ಹಾನಿಯಾಗಿದೆ.

ಪಾನೀರು ಬಳಿ 10 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಈಗಾಗಲೇ ತೊಂದರೆಗೊಳಗಾದ ಎರಡು ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ  ಕೋಟೆಕಾರ್ ಪ.ಪಂ. ಕ್ರಮ ಕೈಗೊಂಡಿದೆ.  ಕುತ್ತಾರು ರಾಣಿಪುರ ಚರ್ಚ್ ಬಳಿ ಹೊಸದೋಟ ನಾರಾಯಣ ಎಂಬವರ ಮನೆಗೆ ಬೃಹತ್ ಮರಬಿದ್ದು ಭಾಗಶಃ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News