ಕರಾವಳಿಯಲ್ಲಿ ಮಳೆಯ ರೌದ್ರ ತಾಂಡವ

Update: 2019-08-10 17:31 GMT

ಮಂಗಳೂರು, ಆ.10: ಕರಾವಳಿ ಜಿಲ್ಲೆ ದ.ಕ.ದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ರೌದ್ರತೆಯ ತಾಂಡವ ಶನಿವಾರವೂ ಮುಂದುವರಿದಿದೆ.

ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಬೆಳ್ತಂಗಡಿಯಲ್ಲಿ ಶನಿವಾರ ಮಧ್ಯಾಹ್ನ ಬಳಿಕ ನದಿಗಳ ಹರಿವು ತಗ್ಗಿದೆ. ಧರ್ಮಸ್ಥಳ ಸ್ನಾನಘಟ್ಟದಲ್ಲೂ ನೀರು ತಗ್ಗಿದೆ. ಮಂಗಳೂರು ನಗರದ ಹೊರವಲಯ ಗುರುಪುರದಲ್ಲಿ ಪ್ರವಾಹ ಹೆಚ್ಚುತ್ತಿದೆ. ಮಂಗಳೂರು ಹೊರವಲಯದ ವಳಚ್ಚಿಲ್ ಸಮೀಪ ಹಳ್ಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮಳೆಯಿಂದಾಗಿ ಸತ್ತವರ ಸಂಖ್ಯೆ ಜಿಲ್ಲೆಯಲ್ಲಿ ಎರಡಕ್ಕೇರಿದೆ.

ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಅತಿಹೆಚ್ಚು ಅನಾಹುತಗಳು ಸಂಭವಿಸಿವೆ. ಬಂಟ್ವಾಳ ಪೇಟೆ ಮುಳುಗಡೆಯಾಗಿ ಸುಮಾರು 200 ರಷ್ಟು ಮನೆ, ಅಂಗಡಿ ಮುಂಗಟ್ಟುಗಳು ಮುಳುಗಡೆಯಾಗಿದ್ದವು. ಬೆಳ್ತಂಗಡಿಯಲ್ಲೂ ನೂರಾರು ಎಕರೆ ತೋಟ, ತಗ್ಗುಪ್ರದೇಶಗಳು ಜಲಾವೃತವಾಗಿದ್ದವು.ಉಪ್ಪಿನಂಗಡಿಯ ಮುಗೇರಡ್ಕ ದೇವಾಲಯ ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗುಸೇತುವೆ ಶುಕ್ರವಾರದ ಮಹಾಮಳೆಗೆ ಸಂಪೂರ್ಣ ಕೊಚ್ಚಿಹೋಗಿದೆ.

ಮಂಗಳೂರಿನ ಬಂಗ್ರಕೂಳೂರು ಬಳಿ ನಾಲ್ಕು ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಶಾಸಕ ಭರತ್ ಶೆಟ್ಟಿ ಅಧಿಕಾರಿಗಳಿಗೆ ತಿಳಿಸಿ ದೋಣಿ ವ್ಯವಸ್ಥೆ ಕಲ್ಪಿಸುವ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕುದ್ರೋಳಿ ಕಸಾಯಿಖಾನೆಗೆ ಮಳೆನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ, ಕುದ್ರೊಳಿ, ಅಳಕೆ, ಬಂದರ್ ಭಾಗಗಳಲ್ಲಿ ಮಳೆನೀರಿನಿಂದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ತ್ಯಾಜ್ಯರಾಶಿ ಮತ್ತಷ್ಟು ಪ್ರವಾಹೋಪಾದಿಯಲ್ಲಿ ಕುಸಿಯತೊಡಗಿದ್ದು, ತ್ಯಾಜ್ಯ ರಾಶಿಯೊಳಗೆ ಮೂರು ಮನೆಗಳು ಹೂತುಹೋಗಿವೆ. 12 ಎಕರೆ ತೋಟ- ಭೂಮಿ ಸಂಪೂರ್ಣ ನಾಶವಾಗಿದ್ದು, ಸ್ಥಳೀಯರ ಗೋಳು ಮುಗಿಲು ಮುಟ್ಟಿದೆ. ಸ್ಥಳಕ್ಕೆ ಜಿಲ್ಲಾ ಅಧಿಕಾರಿಗಳು, ಶಾಸಕರು ಭೇಟಿ ನೀಡಿದ್ದಾರೆ.

ಕಸಬಾ ಬೆಂಗ್ರೆಯಲ್ಲಿ ದೋಣಿ ದಾಟುವ ಸ್ಥಳ ಜಲಾವೃತವಾಗಿದ್ದು, ಸ್ಥಳೀಯರು ಬವಣೆ ಪಡಬೇಕಾಯಿತು. ಜಪ್ಪಿನಮೊಗರಿನಲ್ಲಿ ಹತ್ತಾರು ಮನೆಗಳು ಪ್ರವಾಹ ಪೀಡಿತವಾಗಿದ್ದು, ಅಲ್ಲಿನ ನಿವಾಸಿಗಳನ್ನು ರಕ್ಷಣಾ ತಂಡದವರು ಸುರಕ್ಷಿತ ಪ್ರದೇಶಗಳಿಗೆ ರವಾನಿಸಿದ್ದಾರೆ. ತೊಕ್ಕೊಟ್ಟು ಸಮೀಪದ ಕಲ್ಲಾಪು ಗ್ರಾಮದಲ್ಲಿ ರಾತ್ರಿಯಿಡೀ ನೀರಿನಲ್ಲಿ ಸಿಲುಕಿ ಕಂಗಾಲಾಗಿದ್ದ 80ರ ಹರೆಯದ ವೃದ್ಧೆ ಮೊಂತೆರಾ ಅವರನ್ನು ರಕ್ಷಿಸಲಾಗಿದೆ. ಅಲ್ಲಿನ 40 ಮನೆಗಳಿಗೆ ನೀರು ನುಗ್ಗಿದ್ದು ತೊಂದರೆಯಾಗಿತ್ತು.

ರಕ್ಷಣಾ ಕಾರ್ಯಾಚರಣೆಗೆ ಶ್ಲಾಘನೆ: ಮಂಗಳೂರಿನಲ್ಲಿ ಕಳೆದ ಸಾಲಿನ ಅನಾಹುತಕಾರಿ ಮಳೆ, ಜಲಪ್ರವಾಹದ ಬಗ್ಗೆ ಮಾಹಿತಿ ಹೊಂದಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಈ ಬಾರಿ ಮಳೆ ಆರಂಭವಾಗುವುದಕ್ಕೆ ಮೊದಲೇ ಅಧಿಕಾರಿಗಳು, ಸಿಬ್ಬಂದಿ ತಂಡವನ್ನು ನಿಯೋಜಿಸಿದ್ದರು. ವ್ಯವಸ್ಥಿತವಾಗಿ ಪರಿಹಾರ- ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಶ್ಲಾಘನೆಗೆ ಪಾತ್ರವಾಗಿದೆ. ಪ್ರವಾಹ ಹೆಚ್ಚಿದ ಶುಕ್ರವಾರ ರಾತ್ರಿಯಿಡೀ ಅಧಿಕಾರಿಗಳ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವಂತೆ ಜಿಲ್ಲಾಡಳಿತ ನೋಡಿಕೊಂಡಿದ್ದು, ಸಾವು- ನೋವಿನ ಪ್ರಮಾಣವನ್ನು ತಗ್ಗಿಸಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಇಳಿಮುಖವಾಗಿದೆ. ನದಿಗಳ ಹರಿವು ಪ್ರಮಾಣವೂ ಕ್ಷೀಣಿಸುತ್ತಿದೆ. ಮಧ್ಯಾಹ್ನದ ವೇಳೆಗೆ ಬಂಟ್ವಾಳದಲ್ಲಿ ನೇತ್ರಾವತಿ ಮಟ್ಟ 8.5ಕ್ಕೆ ಇಳಿಯಿತು. ಆದರೆ, ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಾಗೂ ಸಣ್ಣ ಪುಟ್ಟ ತೋಡುಗಳು ಉಕ್ಕಿ ಹರಿಯುತ್ತಿರುವುದರಿಂದ ಜಲಾವೃತಗೊಂಡ ಪ್ರದೇಶಗಳ ನೀರು ಇಳಿಯಲು ತಡವಾಗುತ್ತಿದೆ. ಪಾಣೆಮಂಗಳೂರು ಬಳಿ ಟೈಲ್ಸ್ ಫ್ಯಾಕ್ಟರಿಗೆ ನೀರು ನುಗ್ಗಿ ರಾತ್ರಿ ಆತಂಕದಲ್ಲಿ ಕಾಲ ಕಳೆದ 9 ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಂಟ್ವಾಳ- ಧರ್ಮಸ್ಥಳ ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಸ್ತಬ್ಧವಾಗಿತ್ತು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಶುಕ್ರವಾರ ತಡರಾತ್ರಿ ನೇತ್ರಾವತಿ, ಕುಮಾರಧಾರಾ ಸೇರಿದಂತೆ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿತ್ತು. 1974ರ ಬಳಿಕ ಇದೇ ಮೊದಲ ಬಾರಿಗೆ ನೇತ್ರಾವತಿ ನದಿ ನೀರಿನ ಮಟ್ಟ ಶುಕ್ರವಾರ ರಾತ್ರಿ 11.7 ಮೀ.ಗೆ (ಅಪಾಯದ ಮಟ್ಟ 8.5 ಮೀ.) ಏರಿಕೆಯಾಗಿ ಬಂಟ್ವಾಳ ಪೇಟೆ ಜಲಾವೃತವಾಗಿತ್ತು.
ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನೀರಿನ ಮಟ್ಟ 8.5 ಮೀ.ಗೆ ಇಳಿದು ತುಸು ನಿರಾಳಗೊಳಿಸಿದೆಯಾದರೂ ಭಾರೀ ಮಳೆಯಿಂದ ಸಣ್ಣಪುಟ್ಟ ತೋಡುಗಳು ಉಕ್ಕಿ ಹರಿಯುತ್ತಿದ್ದುದರಿಂದ ತಗ್ಗು ಪ್ರದೇಶಗಳ ನೀರು ಪೂರ್ತಿ ಇಳಿಯಲು ತೊಡಕಾಗಿದೆ.

ಚಾರ್ಮಾಡಿ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದ್ದರಿಂದ ನಾಲ್ಕನೇ ದಿನವೂ ಈ ಘಾಟಿ ಸಂಚಾರ ಸ್ಥಗಿತವಾಗಿದೆ. ಆ.14ರವರೆಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮಂಗಳೂರು- ಬೆಂಗಳೂರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಪ್ರಯಾಣಿಕರ ವಾಹನಗಳಿಗೆ ಜಿಲ್ಲಾಧಿಕಾರಿ ಅವಕಾಶ ನೀಡಿದ್ದರೂ ಇದೀಗ ಶಿರಾಡಿ ಮೇಲ್ಭಾಗದ ದೋಣಿಗಲ್ ಎಂಬಲ್ಲಿ ಗುಡ್ಡ ಕುಸಿದ ಪರಿಣಾಮ ಈ ರಸ್ತೆಯನ್ನೂ ಬಂದ್ ಮಾಡಲಾಗಿದೆ.

ಕಾರ್ಕಳ- ಮಾಳ- ಎಸ್‌ಕೆ ಬಾರ್ಡರ್ ದಾಟಿ ಶೃಂಗೇರಿ ಕಳಸ ಮಾರ್ಗದಲ್ಲಿ ಗುಡ್ಡ ಕುಸಿದಿದ್ದರಿಂದ ಅದೂ ಬಂದ್ ಆಗಿದೆ. ಇನ್ನು ಬಿಸಿಲೇ ಘಾಟಿಯಲ್ಲಿ ಮರಗಳು ಉರುಳಿ, ರಸ್ತೆ ಸಂಪೂರ್ಣ ಹದಗೆಟ್ಟು ಆ ಮಾರ್ಗವೂ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಮಂಗಳೂರು- ಬೆಂಗಳೂರು ಸಂಪರ್ಕಿಸುವ ಏಕೈಕ ನೇರ ರೈಲು ಮಾರ್ಗದ ಸಕಲೇಶಪುರದಿಂದ ಸುಬ್ರಹ್ಮಣ್ಯ ನಡುವೆ ಸಾಮೂಹಿಕ ಭೂಕುಸಿತವಾಗಿದ್ದರಿಂದ ಈ ಮಾರ್ಗದಲ್ಲಿ ಆ.22ರವರೆಗೆ ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ವಿಮಾನ ಸಂಚಾರವೂ ಅಸ್ತವ್ಯಸ್ತವಾಗಿದೆ.

ಕರಾವಳಿಯನ್ನು ಬೆಂಗಳೂರು ಮತ್ತು ಬಯಲು ಸೀಮೆಗೆ ಸಂಪರ್ಕಿಸಲು ಉಳಿದಿರುವ ಏಕೈಕ ಮಾರ್ಗ ಸಂಪಾಜೆ ಘಾಟಿ. ಅದೂ ಕುಶಾಲನಗರ ಬಳಿ ಜಲಾವೃತವಾಗಿದ್ದರಿಂದ ಮಡಿಕೇರಿ- ಸುಂಟಿಕೊಪ್ಪ- ಚೆಟ್ಟಳ್ಳಿ- ಸಿದ್ದಾಪುರ ಮೂಲಕ ಸುತ್ತು ಬಳಸಿ ಹೋಗುವಂತಾಗಿದೆ. ಇನ್ನು ಆಗುಂಬೆ ಮಾರ್ಗ ಇದ್ದರೂ ಅದು ತೀರ ದುರ್ಗಮ ಮತ್ತು ಭಾರೀ ಸುತ್ತು ಬಳಸು ಮಾರ್ಗವಾಗಿದೆ. ಹೀಗಾಗಿ ದಕ್ಷಿಣ ಕನ್ನಡದ ಹೊರ ಸಂಚಾರ ವ್ಯವಸ್ಥೆ ಬಹುತೇಕ ಸ್ತಬ್ಧವಾಗಿದೆ.

ತೀರವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಡಿಸಿ ಸೂಚನೆ

ಭಾರೀ ಮಳೆಯಿಂದಾಗಿ ಗುರುಪುರ-ಫಲ್ಗುಣಿ ನದಿಗೆ ಪ್ರವಾಹೋಪಾದಿಯಲ್ಲಿ ನೀರು ಹರಿದು ಬರುತ್ತಿದೆ. ಈ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ತೀರವಾಸಿಗಳು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಈಗಾಗಲೇ ನದಿ ತೀರದ ಪ್ರಮುಖ ಸಂಭಾವ್ಯ ಅಪಾಯ ಸ್ಥಳಗಳಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಗುರುಪುರ- ಫಲ್ಗುಣಿ ನದಿ ತೀರದ ಎರಡೂ ಬದಿಗಳ ಸಮೀಪದ ನಿವಾಸಿಗಳು ತಕ್ಷಣದಿಂದಲೇ ತಮ್ಮ ಕುಟುಂಬದೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಪರಿಹಾರ ಕೇಂದ್ರದಲ್ಲಿ 626 ಸಂತ್ರಸ್ತರ ರಕ್ಷಣೆ

ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಾನಿಯ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಜಿಲ್ಲೆಯ ಒಂಬತ್ತು ಪರಿಹಾರ ಕೇಂದ್ರಗಳಲ್ಲಿ 626 ಸಂತ್ರಸ್ತರು ರಕ್ಷಣೆ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ 28 ಕುಟುಂಬಗಳು, ಬೆಳ್ತಂಗಡಿ ತಾಲೂಕಿನಲ್ಲಿ 108 ಕುಟುಂಬಗಳು, ಪುತ್ತೂರು ತಾಲೂಕಿನ ಒಂಬತ್ತು ಕುಟುಂಬಗಳು, ಸುಳ್ಯ ತಾಲೂಕಿನಲ್ಲಿ ಎಂಟು ಕುಟುಂಬಗಳನ್ನು ಸ್ಥಳಾಂತರಿಸಿ ತಾಲೂಕುಗಳ ವ್ಯಾಪ್ತಿಯ ಪರಿಹಾರ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಸಹಿತ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಾಗೂ ಬಂಟ್ವಾಳ ಐಬಿ, ಬೆಳ್ತಂಗಡಿಯ ವೇಣೂರು, ಲಾಯಿಲ, ಮಿತ್ತಬಾಗಿಲು, ಚಾರ್ಮಾಡಿ, ಮಿತ್ತಬಾಗಿಲು-ಕಿಲ್ಲೂರು, ಕೊಕ್ಕಡ ಹಾಗೂ ಮೊಗ್ರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪಿಯು ಕಾಲೇಜು ಹಾಗೂ ಉಪ್ಪಿನಂಗಡಿ ಪುಳಿತ್ತಡಿ ಪ್ರಾಥಮಿಕ ಶಾಲೆ, ಸುಳ್ಯ ತಾಲೂಕಿನ ಕಲ್ಮಕಾರು ಕೊಲ್ಲಮೊಗ್ರು ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ರಕ್ಷಣೆ ನೀಡಲಾಗಿದೆ.

ಜಿಲ್ಲೆಯಲ್ಲಿ 626 ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗಿದ್ದು, ಈ ಪೈಕಿ ಬಂಟ್ವಾಳ ವ್ಯಾಪ್ತಿಯಲ್ಲಿ 55 ಸಂತ್ರಸ್ತರು, ಬೆಳ್ತಂಗಡಿಯ 455, ಪುತ್ತೂರಿನ 54, ಸುಳ್ಯದ 22 ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹೆಚ್ಚು ಅನಾಹುತವಾಗಿರುವ ಬಂಟ್ವಾಳ, ಬೆಳ್ತಂಗಡಿಯಲ್ಲಿ ಎನ್‌ಡಿಆರ್‌ಎಫ್‌ನ 2 ತಂಡ (ತಲಾ 13 ಮಂದಿಯ)ಗಳನ್ನು ನಿಯೋಜಿಸಲಾಗಿದ್ದು, ಅವರು ಸೂಕ್ತ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News