ಉಪ್ಪಿನಂಗಡಿ: 24 ಗಂಟೆಯಿಂದ ಸಂಗಮ ಸ್ಥಿತಿಯಲ್ಲಿಯೇ ಇರುವ ನದಿಗಳು

Update: 2019-08-10 17:36 GMT

ಉಪ್ಪಿನಂಗಡಿ: ಶುಕ್ರವಾರ ದೇವಳದ ಮುಂಭಾಗದಲ್ಲಿ ಸಂಗಮಿಸಿದ ಉಭಯ ನದಿಗಳು ಶನಿವಾರವಿಡೀ ಸಂಗಮಿಸಿದ ಸ್ಥಿತಿಯಲ್ಲಿಯೇ ನೀರಿನ ಹರಿವು ಮುಂದುವರೆಸಿದ್ದು, ಆದ್ದರಿಂದ ಶ್ರೀ ಮಹಾಕಾಳಿ ಅಮ್ಮನವರಿಗೆ ಶುಕ್ರವಾರ ರಾತ್ರಿ, ಶನಿವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಯನ್ನು ಅರ್ಚಕರು ದೋಣಿಯಲ್ಲಿ ತೆರಳಿ ನೆರವೇರಿಸಿದರು.

1974ರ ದೊಡ್ಡ ನೆರೆ ಬಂದ ಬಳಿಕ ಶ್ರೀ ದೇವರಿಗೆ ದೋಣಿಯಲ್ಲಿ ತೆರಳಿ ಪೂಜೆ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆ.

ನೇತ್ರಾವತಿ- ಕುಮಾರಧಾರ ನದಿಗಳು ಶುಕ್ರವಾರ ಉಕ್ಕೇರಿ ಹರಿದಿದ್ದು,  ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಎಡ ಹಾಗೂ ಬಲ ಭಾಗದಿಂದ ಬಂದ ಎರಡೂ ನದಿಗಳು ರಾತ್ರಿ ಏಳು ಗಂಟೆಗೆ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಒಂದಕ್ಕೊಂದು ಸಂಧಿಸಿ, ಸಂಗಮ ನಡೆದಿತ್ತು. ಹೀಗೆ ನಡೆದ ಸಂಗಮ ಶನಿವಾರ ರಾತ್ರಿ 7ಗಂಟೆಯಾದರೂ ಇಳಿದಿಲ್ಲ. ಸಂಗಮಿಸಿದ  ಸ್ಥಿತಿಯಲ್ಲಿಯೇ ನೀರಿನ ಹರಿವು ಮುಂದುವರೆದಿತ್ತು.

ಈ ಹಿಂದೆ ನದಿಗಳು ಸಂಗಮವಾದರೆ ಕೆಲ ತಾಸುಗಳಲ್ಲೇ ನೆರೆ ನೀರು ಇಳಿದುಹೋಗುತ್ತಿತ್ತು. ಆದರೆ ಈ ಬಾರಿ ಶನಿವಾರ ನೇತ್ರಾವತಿಯ ಹರಿಯುವಿಕೆ ಶಾಂತವಾಗಿದ್ದರೂ, ಕುಮಾರಧಾರ ನದಿಯ ಹರಿವಿನಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ ನದಿಗಳ ಸಹಜ ಸಂಗಮ ಸ್ಥಳದಲ್ಲಿ ನೇತ್ರಾವತಿ ನದಿಯ ಹರಿಯುವಿಕೆಗೆ ಕುಮಾರಧಾರಾ ನದಿಯ ನೀರಿನ ಹರಿವು ತಡೆಯೊಡ್ಡಿದ ಪರಿಣಾಮ ಉಪ್ಪಿನಂಗಡಿಯ ಸಂಗಮ ಸ್ಥಿತಿ ಶನಿವಾರವೂ ಮುಂದುವರೆದಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ಭಟ್, ನೆರೆಯಿಂದ ಶ್ರೀ ಮಹಾಕಾಳಿ ದೇವಾಲಯ ಸುತ್ತಲೂ ಜಲಾವೃತವಾಗಿದ್ದು, ಇಲ್ಲಿಗೆ ನಡೆದುಕೊಂಡು ತೆರಳಲು ಸಾಧ್ಯವಾಗದ ಕಾರಣ ಶ್ರೀ ಮಹಾಕಾಳಿ ಅಮ್ಮನವರಿಗೆ ಶುಕ್ರವಾರ ರಾತ್ರಿ, ಶನಿವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಯನ್ನು ಅರ್ಚಕರು ದೋಣಿಯಲ್ಲಿ ತೆರಳಿ ನೆರವೇರಿಸಿದರು. 1974ರಲ್ಲಿ ಬಂದ ದೊಡ್ಡ ನೆರೆಯ ಬಳಿಕ ಶ್ರೀ ದೇವರಿಗೆ ದೋಣಿಯಲ್ಲಿ ತೆರಳಿ ಪೂಜೆ ಸಲ್ಲಿಸಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.

1974ರ ದೊಡ್ಡ ನೆರೆ: ಲಭ್ಯ ದಾಖಲೆ ಪ್ರಕಾರ 26.7.1974ರಂದು ಉಪ್ಪಿನಂಗಡಿಯಲ್ಲಿ ಅತೀ ದೊಡ್ಡ ನೆರೆ ಬಂದಿತ್ತು. ಈ ಸಂದರ್ಭ ಸಂಗಮವಾಗಿತ್ತು. ಆ ಬಳಿಕದ ದೊಡ್ಡ ನೆರೆ ಈ ಬಾರಿಯದ್ದಾಗಿದೆ. ಅದಲ್ಲದೆ, 27.8.1997, 13.8.2008 ಹಾಗೂ 18.7.09 ಹಾಗೂ 2013ರಂದು ಉಪ್ಪಿನಂಗಡಿಯಲ್ಲಿ ಸಂಗಮವಾಗಿತ್ತು. 2018 ರಂದು ಆ. 14 ಮತ್ತು 16ರಂದು 2018ರಲ್ಲಿ ಆ 14ರಂದು ಮತ್ತು ಆ.16ರಂದು ಸಂಗಮವಾಗಿತ್ತು. ಲಭ್ಯ ಇತಿಹಾಸದ ಪ್ರಕಾರ ಒಂದೇ ವರ್ಷದಲ್ಲಿ ಎರಡು ಬಾರಿ ಸಂಗಮವಾಗುವುದು ಇದೇ ಪ್ರಥಮವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News