ಅರಫಾದಲ್ಲಿ ಹಜ್ಜಾಜ್ ಗಳ ಮೇಲೆ ಸುರಿದ ಭಾರೀ ಮಳೆ

Update: 2019-08-10 18:34 GMT

ಅರಫಾ (ಸೌದಿ ಅರೇಬಿಯಾ), ಆ.10: ಶನಿವಾರ ಅರಫಾ ದಲ್ಲಿ ಹಜ್ ವಿಧಿಗಳನ್ನು ನಡೆಸುತ್ತಿದ್ದ ಹಜ್ಜಾಜ್ ಗಳ  ಮೇಲೆ ಭಾರೀ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಕೆಲವು ಹಜ್ಜಾಜ್ ಗಳು ಮಳೆಯಿಂದ ಆಶ್ರಯ ಪಡೆಯಲು ಧಾವಿಸಿದರೆ ಇನ್ನು ಕೆಲವರು ರಸ್ತೆಗಳಿಗೆ ಓಡಿ ಪ್ರಾರ್ಥನೆ ಸಲ್ಲಿಸಿದರು.

ತಾವು ಪ್ರಾರ್ಥನೆ ಸಲ್ಲಿಸುತ್ತಿರುವಾಗ ಮಳೆ ಬಂದರೆ ಪ್ರಾರ್ಥನೆ ಹೆಚ್ಚು ಫಲಪ್ರದವಾಗುತ್ತದೆ ಎನ್ನುವುದು ನಂಬಿಕೆಯಾಗಿದೆ. ಹೀಗಾಗಿ ಮಳೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಬೀದಿಗಳು ಹಜ್ ಯಾತ್ರಿಗಳಿಂದ ತುಂಬಿ ಹೋಗಿದ್ದವು.

ಹಲವು ಹಜ್ಜಾಜ್ ಗಳು ಆಶ್ರಯದ ಅಗತ್ಯವಿದ್ದ ಇತರರಿಗೆ ನೆರವಾದರು ಮತ್ತು ಮಳೆಯಲ್ಲಿ ನೆನೆಯುತ್ತಿದ್ದವರಿಗೆ ಬಟ್ಟೆಗಳನ್ನು ನೀಡಿದರು.

ಸುರಕ್ಷಿತವಾಗಿರುವಂತೆ ಮತ್ತು ನೆರೆಗೆ ತುತ್ತಾಗಬಹುದಾದ ತಗ್ಗುಪ್ರದೇಶಗಳಿಂದ ದೂರವುಳಿಯುವಂತೆ ಹಾಗೂ ಲೋಹದ ವಸ್ತುಗಳನ್ನು ಸ್ಪರ್ಶಿಸದಂತೆ ನಾಗರಿಕ ರಕ್ಷಣಾ ಇಲಾಖೆಯು ಹಜ್ಜಾಜ್ ಗಳಿಗೆ ಎಚ್ಚರಿಕೆಯನ್ನು ನೀಡಿತ್ತು.

‘ನನಗೆ ತುಂಬ ಸಂತೋಷವಾಗಿದೆ. ನನ್ನ ಹಜ್ ಯಾತ್ರೆಗೆ ಅಲ್ಲಾಹ್‌ನ ಹೆಚ್ಚಿನ ದಯೆ ಪ್ರಾಪ್ತವಾಗಿದೆಂದು ನಾನು ಭಾವಿಸಿದ್ದೇನೆ’ ಎಂದು ಮಳೆಯನ್ನು ಪ್ರಸ್ತಾಪಿಸಿ ಹಜ್ಜಾಜ್ ಓರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News