ಸಜಿಪನಡುವಿನಲ್ಲಿ ಪ್ರವಾಹ: ಹಲವು ಮನೆಗಳು ಜಲಾವೃತ

Update: 2019-08-10 18:47 GMT

ಬಂಟ್ವಾಳ, ಆ.10: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯು ಶನಿವಾರವೂ ಮುಂದುವರಿದಿದ್ದು, ನೇತ್ರಾವತಿ ನದಿ ತೀರದ ಹಲವು ಗ್ರಾಮಗಳು ನೆರೆ ನೀರಿನಿಂದ ಆವೃತವಾಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ನೇತ್ರಾವತಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಸಜೀಪನಡು ಗ್ರಾಮದ ಬೋಳಮೆ, ಬೈಲಗುತ್ತು ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗಿದ್ದು, ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬೋಳಮೆ‌ ಪ್ರದೇಶ ಸಂಪೂರ್ಣ ರಸ್ತೆ ಸಂಪರ್ಕವನ್ನು ಕಳೆದುಕೊಂಡಿದ್ದು, ಅಲ್ಲಿನ 20ಕ್ಕೂ ಹೆಚ್ಚು ಕುಟುಂಬಗಳನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿದೆ.

ಬೈಲಗುತ್ತು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದವರನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಂಕದಕೋಡಿ ಸಂಪರ್ಕಿಸುವ ದಾರಿ ಸಂಪೂರ್ಣ ಮುಚ್ಚಿಹೋಗಿದೆ. ಲಕ್ಷಣಕಟ್ಟೆ ಪ್ರದೇಶಕ್ಕೆ ಸಂಪರ್ಕ ಸಾಧಿಸುವ ರಸ್ತೆಯೂ ಜಲಾವೃತಗೊಂಡಿದ್ದು, ಕೋಣಿಮಾರು ಹಾಗೂ ಪೇಟೆಯಲ್ಲಿರುವ ತೋಟಗಳು ಮುಳುಗಡೆಯಾಗಿದೆ.

ಹಳೇ ಕೇಂದ್ರ ಜುಮಾ ಮಸೀದಿಯ ಸುತ್ತಲೂ ನೀರು ರಭಸದಿಂದ ಹರಿಯುತ್ತಿದೆ. ಹೊಳೆ ಬದಿಯ ಮೇಲಿನ ರಸ್ತೆಗೆ ನೀರು ನುಗ್ಗಿದ್ದು, ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.

ಗೋಳಿಪಡ್ಪು ಸಮೀಪ ಮನೆಯ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದಿದ್ದು, ಅಗ್ನಿಶಾಮಕ ದಳದವರು ಮರ ತೆರವುಗೊಳಿಸಿದ್ದಾರೆ. ಸಂಜೆ ವೇಳೆಗೆ ಮಳೆ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News