ಐಐಟಿ-ಬಿ ಘಟಿಕೋತ್ಸವದಲ್ಲಿ ಹುಸಿಬಾಂಬ್ ಸಿಡಿಸಿದ ಕೇಂದ್ರ ಸಚಿವ ನಿಶಾಂಕ್ !

Update: 2019-08-11 04:25 GMT

ಮುಂಬೈ: ಸಂಸ್ಕೃತದ ಬಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಸುಳ್ಳು ಮಾಹಿತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರಸಂಗ ನಡೆದಿದೆ.

ಅದು ಕೂಡಾ ಮುಂಬೈ ಐಐಟಿ ಪದವಿ ಪ್ರದಾನ ಸಮಾರಂಭದಲ್ಲಿ !

"ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗೆ ಸಂಸ್ಕೃತ ಅತ್ಯಂತ ಸೂಕ್ತ ಭಾಷೆ ಎನ್ನುವುದು ನಾಸಾ ವಿಜ್ಞಾನಿಗಳ ಅಭಿಮತ" ಎಂದು ಶನಿವಾರ ಮುಂಬೈ ಐಐಟಿಯ 57ನೇ ಘಟಿಕೋತ್ಸವ ಭಾಷಣದಲ್ಲಿ ನಿಶಾಂಕ್ ಈ ಅಂಶ ಉಲ್ಲೇಖಿಸಿದರು.

ಸದ್ಯೋಭವಿಷ್ಯದಲ್ಲಿ ಕಂಪ್ಯೂಟರ್‌ಗಳು ಮಾತನಾಡಬೇಕಾದರೆ, ಸಂಸ್ಕೃತದ ಬಲದಿಂದಷ್ಟೇ ಹಾಗೆ ಮಾಡಲು ಸಾಧ್ಯ; ಇಲ್ಲದಿದ್ದರೆ ಕಂಪ್ಯೂಟರ್‌ಗಳು ಕ್ರ್ಯಾಷ್ ಆಗುತ್ತವೆ; ಏಕೆಂದರೆ ಸಂಸ್ಕೃತ ವೈಜಾನಿಕ ಭಾಷೆ" ಎಂದು ಸಚಿವರು ನುಡಿದರು.

ಐಐಟಿ ವಿದ್ಯಾರ್ಥಿಗಳ ಪ್ರಕಾರ, ಸಚಿವರು ಉಲ್ಲೇಖಿಸಿದ್ದು ಹುಸಿ ಮಾಹಿತಿ. ನಾಸಾದ "ಮಿಷನ್ ಸಂಸ್ಕೃತ" ಎಂಬ ಬರಹ ಇಂಟರ್‌ನೆಟ್‌ನಲ್ಲಿ ಹಲವು ವರ್ಷಗಳಿಂದ ವೈರಲ್ ಆಗಿದೆ. ಈ ಮಾಹಿತಿಯನ್ನು ಸಚಿವರು ತಮ್ಮ ಭಾಷಣ ದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ವಾಸ್ತವವಾಗಿ ಇದಕ್ಕೆ ಯಾವುದೇ ಆಧಾರ ಇಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಚಿವರ ಭಾಷಣ ತಮಾಷೆಯ ವಸ್ತುವಾಗಿದೆ. "ಸಚಿವರು ಭಾಷಣ ಮಾಡುವ ಮುನ್ನ ಸತ್ಯಾಂಶಗಳನ್ನು ಪರಿಶೀಲಿಸಿ ದೃಢೀಕರಿಸಲು ಇದು ಸಕಾಲ" ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಐಐಟಿ-ಬಿ ಘಟಿಕೋತ್ಸವದಲ್ಲಿ ನಿಶಾಂಕ್ ಅವರು ಪೋರ್ಟೆಲ್ ಸತ್ಯದ ಬಾಂಬ್ ಸಿಡಿಸಿದ್ದಾರೆ; ವೇದಕಾಲದಲ್ಲಿ ಸಾಧುಗಳು ಬಾಹ್ಯಾಕಾಶಯಾನ ಸಂಶೋಧಿಸಿದ್ದರು. ನಾಸಾ ಅಧಿಕೃತವಾಗಿ ಇದನ್ನು ಒಪ್ಪಿಕೊಂಡಿದೆ" ಎಂದು ಮತ್ತೊಂದು ಪೋಸ್ಟ್‌ನಲ್ಲಿ ವ್ಯಂಗ್ಯ ವ್ಯಕ್ತವಾಗಿದೆ.

ಭಾರತೀಯ ಶಿಕ್ಷಣದ ಗತವೈಭವ ಮರುಕಳಿಸಬೇಕು ಎಂದೂ ಸಚಿವರು ಆಶಿಸಿದ್ದಾರೆ. "ಇಡೀ ವಿಶ್ವದಲ್ಲಿ ಏನೂ ಇಲ್ಲದಿದ್ದಾಗ ನಮ್ಮಲ್ಲಿ ತಕ್ಷಶಿಲೆ, ನಳಂದ ಮತ್ತು ವಿಕ್ರಮಶಿಲೆಯಂಥ ಸಂಸ್ಥೆಗಳಿದ್ದವು; ಇವು ಜ್ಞಾನ ಹಾಗೂ ವಿಜ್ಞಾನ ಮೂಲಗಳು" ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News