ಟ್ವಿಟರ್ ತ್ಯಜಿಸಿದ ಅನುರಾಗ್ ಕಶ್ಯಪ್: ಕಾರಣವೇನು ಗೊತ್ತೇ ?

Update: 2019-08-11 05:16 GMT

ಮುಂಬೈ: ಬಾಲಿವುಡ್ ಚಿತ್ರನಿರ್ಮಾಪಕ ಮತ್ತು ನಟ ಅನುರಾಗ್ ಕಶ್ಯಪ್, ಟ್ವಿಟರ್ ತ್ಯಜಿಸುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ. ಪೋಷಕರು ಹಾಗೂ ಪುತ್ರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆ ರದ್ದುಪಡಿಸುವ ಮುನ್ನ ಸರಣಿ ಟ್ವೀಟ್ ಮಾಡಿರುವ ಅವರು, "ಪೋಷಕರಿಗೆ ಬೆದರಿಕೆ ಕರೆಗಳು ಬರುವಾಗ ಮತ್ತು ಮಗಳಿಗೆ ಆನ್‌ಲೈನ್ ಬೆದರಿಕೆಗಳು ಬರುತ್ತಿರುವಾಗ ಯಾರೂ ಮಾತನಾಡಲು ಬಯಸುವುದಿಲ್ಲ. ಅಪರಾಧಿಗಳದ್ದೇ ಕಾರುಬಾರು; ಅಪರಾಧಕ್ಕೀಡಾದವರು ಹೊಸ ವಿಧಾನ ಕಂಡುಕೊಳ್ಳಬೇಕು" ಎಂದು ಹೇಳಿದ್ದಾರೆ.

"ನವಭಾರತದಲ್ಲಿ ಎಲ್ಲರಿಗೂ ಅಭಿನಂದನೆಗಳು; ಇಲ್ಲಿ ನೀವು ಬೆಳೆಯಿರಿ. ನನ್ನ ಮನಸ್ಸಿನಲ್ಲಿದ್ದುದನ್ನು ನಾನು ನಿರ್ಭೀತಿಯಿಂದ ಮಾತನಾಡಲು ಅವಕಾಶವಾಗುತ್ತಿಲ್ಲ ಎಂದಾದಲ್ಲಿ, ನಾನು ಮಾತನಾಡದಿರುವುದೇ ಲೇಸು" ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರದ ನೀತಿಗಳ ಕಟು ಟೀಕಾಕರರಾಗಿದ್ದ ಕಶ್ಯಪ್, ಕಳೆದ ಮೇ ತಿಂಗಳಲ್ಲಿ ಕೆಲ ಬಿಜೆಪಿ ಬೆಂಬಲಿಗರು ಮಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದಾಗ ಆ ಟ್ವೀಟನ್ನು ಮೋದಿಯವರಿಗೆ ಟ್ಯಾಗ್ ಮಾಡಿದ್ದರು.

ತಮ್ಮ ಹೆಸರಿನ ಹಿಂದೆ ಚೌಕೀದಾರ್ ಎಂದು ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಂನಲ್ಲಿ ಆಲಿಯಾ ಕಶ್ಯಪ್ ಅವರನ್ನು ರೇಪ್ ಮಾಡುವ ಬೆದರಿಕೆ ಹಾಕಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News