ಬಂಟ್ವಾಳ: ಶಾಂತವಾಗಿ ಹರಿಯತೊಡಗಿದ ನೇತ್ರಾವತಿ
ಬಂಟ್ವಾಳ: ಕಳೆದ 8 ದಿನಗಳಿಂದ ಪಶ್ಚಿಮ ಘಟ್ಟ, ಜಲನಯನ ಹಾಗೂ ಕರಾವಳಿಯಾದ್ಯಂತ ಭಾರೀ ಮಳೆಯಿಂದಾಗಿ ಭೋರ್ಗರೆದು ಹರಿಯುತ್ತಿದ್ದ ನೇತ್ರಾವತಿಯು ರವಿವಾರ ಮುಂಜಾನೆಯಿಂದ ಶಾಂತವಾಗಿ ಹರಿಯತೊಡಗಿದೆ.
ಶುಕ್ರವಾರವ ತಡರಾತ್ರಿ ಹಾಗೂ ಶನಿವಾರ ಮುಂಜಾನೆ 11.7 ಮೀ. ಅಪಾಯಕಾರಿ ಮಟ್ಟದಲ್ಲಿ ಹರಿದು ಬಂಟ್ವಾಳ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿ ದ್ವೀಪದಂತಾಗಿತ್ತು. ನೇತ್ರಾವತಿ ನದಿಯು ಶನಿವಾರ ಸಂಜೆ 10.7 ಮೀ. ಆಗಿ ಹಾಗೂ ರಾತ್ರಿ 10.5 ಮೀ.ನಲ್ಲಿ ಹರಿಯುತ್ತಿತ್ತು.
ಮಳೆಯ ಪ್ರಮಾಣ ಇಳಿಕೆಯಾದ್ದರಿಂದ ನೇತ್ರಾವತಿಯ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ. ಇಂದು ಬೆಳಗ್ಗೆಯ ವೇಳೆ ನೇತ್ರಾವತಿ ನೀರಿನ ಮಟ್ಟ 9.1 ಮೀ. ಆಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ತಿಳಿಸಿದರು.
ಆದರೆ, ನೇತ್ರಾವತಿ ಮಟ್ಟ ಕಡಿಯಾಗಿ ಒಳರಸ್ತೆ, ಕೃಷಿ ಭೂಮಿ ಗೆ ಬಂದಿದ್ದ ಇಳಿಮುಖವಾಗುತ್ತಿದ್ದು, ನೆರೆ ಪೀಡಿತ ಪ್ರದೇಶಗಳಾದ ಆಲಡ್ಕ, ಬೋಗೋಡಿ, ಪಾಣೆಮಂಗಳೂರು, ತಲಪಾಡಿ, ಜಕ್ರಿಬೆಟ್ಟು, ಬಡ್ಡಕಟ್ಟೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಿಧಾನವಾಗಿ ನೆರೆ ತಗ್ಗುತ್ತಿದೆ. ಶನಿವಾರ ನೆರೆಗೆ ಸಿಲುಕಿ ನಲುಗಿದ ಬಂಟ್ವಾಳ ಪೇಟೆ ಜನರು ನಿಟ್ಟುಸಿರು ಬಿಡುವಂತಾಗಿದೆ.
ರಸ್ತೆ ಸಂಚಾರಕ್ಕೆ ಮುಕ್ತ
ಬಂಟ್ವಾಳದಿಂದ ಧರ್ಮಸ್ಥಳ ಕ್ಕೆ ಹೋಗುವ ರಸ್ತೆ ಜಕ್ರಿಬೆಟ್ಟು ವಿನಲ್ಲಿ ರಸ್ತೆಗೆ ನೀರು ಬಂದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ, ರಾತ್ರಿಯಿಂದ ನೀರಿನ ಮಟ್ಟ ಕಡಿಮೆಯಾಗುತ್ತ ಬಂದಿರುವ ದರಿಂದ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ನೆರೆ ಇಳಿದಿರುವ ಮನೆಗಳ ಹಾಗೂ ಗಂಜಿಕೇಂದ್ರದಲ್ಲಿರುವ ಕುಟುಂಬಗಳು ಕೂಡ ವಾಪಸು ಮನೆಯ ಸ್ವಚ್ಚತೆಗೆ ತೆರಳಿದ್ದಾರೆ.