ಸಾಂಕ್ರಾಮಿಕ ರೋಗಗಳ ಭೀತಿ ಸಾಧ್ಯತೆ: ಎಚ್ಚರವಹಿಸಲು ಡಿಎಚ್‌ಒ ಕರೆ

Update: 2019-08-11 10:55 GMT

ಮಂಗಳೂರು, ಆ.11: ದ.ಕ. ಜಿಲ್ಲೆಯಾದ್ಯಂದ ರವಿವಾರ ಮಳೆ ಮತ್ತು ನೆರೆ ಹಾವಳಿ ಇಳಿಮುಖ ಕಂಡಿವೆ. ಈ ಮಧ್ಯೆ ನೆರೆ ಪೀಡಿತ ಪ್ರದೇಶಗಳಲ್ಲಿನ ನೀರು ಮತ್ತು ನೊಣಗಳಿಂದ ಸೊಳ್ಳೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಹಾಗಾಗಿ ಸಾರ್ವಜನಿಕರು ಮುಂಜಾಗರೂಕತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನದಿ, ತೊರೆಗಳಲ್ಲಿ ಹರಿಯುವ ಕಲುಷಿತ ಪ್ರವಾಹದ ನೀರು ಕೆರೆ, ಬಾವಿಗಳಿಗೆ ಸೇರಿರುವುದರಿಂದ ವಾಂತಿಬೇಧಿ, ವಿಷಮಶೀತ ಜ್ವರ, ಇಲಿಜ್ವರ, ಜಾಂಡಿಸ್ ರೋಗಗಳು ಹರಡುವ ಸಾಧ್ಯತೆಯಿದೆ. ಸಾರ್ವಜನಿಕರು ಬಾವಿಗಳ ನೀರನ್ನು ಆರೋಗ್ಯ ಕಾರ್ಯಕರ್ತರ ಮೂಲಕ ಪರೀಕ್ಷಿಸಿ ಕುಡಿಯಲು ಯೋಗ್ಯವೇ ಎಂದು ತಿಳಿದುಕೊಂಡರೆ ಉತ್ತಮ. ಕುಡಿಯಲು ಸಾಧ್ಯವಿಲ್ಲ ಎಂದಾದರೆ ಕ್ಲೋರಿನೈಸೇಶನ್ ಮಾಡಿ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಪುನರ್ವಸತಿ ಕೇಂದ್ರಗಳಲ್ಲಿ ವೈದ್ಯರು, ಆರೋಗ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಂಗಡಿಗಳಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣ ಹಂಪಲುಗಳನ್ನು ಖರೀದಿಸಬಾರದು. ತರಕಾರಿ ಹಣ್ಣುಗಳನ್ನು ಬಿಸಿ ನೀರಿನಿಂದ ತೊಳೆದು ತಿನ್ನಬೇಕು. ಸಾಧ್ಯವಾದಷ್ಟು ಬಿಸಿ ಆಹಾವರನ್ನೇ ಸೇವಿಸಬೇಕು. ನೀರನ್ನು 20 ನಿಮಿಷ ಕುದಿಸಿ ಬಳಿಕ ಸೋಸಿ ಆರಿಸಿ ಕುಡಿಯಬೇಕು. ವಾಂತಿಬೇಧಿಯಾದರೆ ಕುದಿಸಿ ಆರಿಸಿದ ನೀರಿಗೆ ಒಂದು ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆ ಹಾಕಿ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣವನ್ನು ತಡೆಯಬಹುದು ಎಂದು ಡಿಎಚ್‌ಒ ಡಾ.ರಾಮಕೃಷ್ಣರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ. ಉಪಸ್ಥಿತರಿದ್ದರು.

ಡೆಂಗ್-ಎಚ್1 ಎನ್1 ಜಾಗೃತಿ

ಸಾರ್ವಜನಿಕರು ಡೆಂಗ್ -ಎಚ್1ಎನ್1 ಕುರಿತೂ ಎಚ್ಚರಿಕೆ ವಹಿಸಬೇಕು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎಚ್1ಎನ್ 1ಪ್ರಕರಣ ಪತ್ತೆಯಾಗಿದ್ದು, ಮಾರ್ಚವರೆಗೂ ಡೆಂಗ್ ಹಾವಳಿ ಇತ್ತು. ತಂಪು ವಾತಾವರಣ ಇದಕ್ಕೆ ಪೂರಕವಾಗಿದ್ದು, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಯಾವುದೇ ಜ್ವರ ಬಂದರೂ ವಿಶ್ರಾಂತಿಗೆ ಆದ್ಯತೆ ನೀಡಬೇಕು. ಡೆಂಗ್ ಮಳೆಗೆ ಕಡಿಮೆಯಾಗುತ್ತದೆ. ಆದರೆ ಪ್ರಸ್ತುತ ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಳ್ಳತ್ತಿರುವುದರಿಂದ ಮತ್ತೆ ಎಚ್ಚರಿಕೆ ಅವಶ್ಯವಾಗಿದೆ ಎಂದು ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಹೋಟೆಲ್‌ಗಳಲ್ಲಿ ಕುದಿಸಿದ ನೀರು

ಜಿಲ್ಲೆಯ ಎಲ್ಲ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಕುದಿಸಿ ಆರಿಸಿದ ಬಿಸಿ ನೀರನ್ನೇ ನೀಡಬೇಕು. ಆಹಾರ ಪದಾರ್ಥಗಳನ್ನು ತಯಾರಿಸುವವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾಲಕರು ಈ ಕುರಿತು ಗಮನ ಹರಿಸಬೇಕು ಎಂದು ಆರೋಗ್ಯಾಧಿಕಾರಿ ಸೂಚಿಸಿದ್ದಾರೆ.

2 ಡೆಂಗ್ ಸಾವು ಪ್ರಕರಣ ದೃಢ

ಜಿಲ್ಲೆಯಲ್ಲಿ ಈವರೆಗೆ 813 ಮಂದಿಯಲ್ಲಿ ಶಂಕಿತ ಡೆಂಗ್ ಜ್ವರ ಪತ್ತೆಯಾಗಿದ್ದು, ಹೆಚ್ಚಿನವರು ಗುಣಮುಖರಾಗಿದ್ದಾರೆ. ಕಡಬದ ವೀಣಾ ನಾಯಕ್ ಹಾಗೂ ಮಂಗಳೂರಿನ ನಾಗೇಶ್ ಪಡು ಡೆಂಗ್‌ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ವೀಣಾ ನಾಯಕ್‌ರ ಮರಣವುರಾಜ್ಯಮಟ್ಟದ ತಪಾಸಣೆಯಲ್ಲಿಯೂ ದೃಢಪಟ್ಟಿದೆ. ನಾಗೇಶ್ ಪಡು ಅವರ ಮರಣವು ಜಿಲ್ಲಾ ಮಟ್ಟದ ಅಡಿಟ್‌ನಲ್ಲಿ ದೃಢವಾಗಿದ್ದು, ರಾಜ್ಯಕ್ಕೆ ಕಳುಹಿಸಲಾಗಿದೆ. ಕೃಷ್ ಸುವರ್ಣ ಹಾಗೂ ಶ್ರದ್ಧಾ ಶೆಟ್ಟಿವರ ಸಾವಿನಲ್ಲಿ ಇತರ ಸಮಸ್ಯೆಯೂ ಕಂಡು ಬಂದಿದ್ದು, ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಕಳೆದ 4-5 ದಿನಗಳಿಂದ ಪ್ರಕರಣ ಕಡಿಮೆಯಾಗುತ್ತಿದೆ. ಮಳೆ ಹೆಚ್ಚಾಗಿರುವುದರಿಂ ಲಾರ್ವ ನಾಶವಾಗಿದೆ ಎಂದು ಹೇಳಿದರು.

ಶಂಕಿತ ಡೆಂಗ್‌ನ ಎಲ್ಲ ಪ್ರಕರಣಗಳ ಕಾರ್ಡ್ ಟೆಸ್ಟ್‌ನಲ್ಲಿ ಡೆಂಗ್ ಪಾಸಿಟಿವ್ ತೋರಿಸುತ್ತದೆ. 30 ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗೆ ಮಣಿಪಾಲಕ್ಕೆ ಕಳುಹಿಸಲಾಗಿದೆ. ಜು.21ರಿಂದ ಆ.8ರ ವರೆಗೆ 50,913 ಮನೆಗಳಿಗೆ ಭೇಟಿ ನೀಡಲಾಗಿದ್ದು, 2.70 ಲಕ್ಷ ನೀರು ನಿಲ್ಲುವ ತಾಣಗಳು, 12 ಸಾವಿರ ಸೊಳ್ಳೆ ಉತ್ಪತ್ತಿತಾಣಗಳು ಪತ್ತೆಯಾಗಿದ್ದು, ಶೇ.10ರಷ್ಟು ಮನೆಗಳಲ್ಲಿ ಡೆಂಗ್ ಲಾರ್ವ ಕಂಡು ಬಂದಿದೆ. ನಗರದಲ್ಲಿ 100 ತಂಡಗಳು ಕಾರ್ಯಾಚರಿಸುತ್ತಿದ್ದು, ಇನ್ನೂ ಒಂದೆರಡು ತಿಂಗಳು ಕಾರ್ಯಾಚರಣೆ ನಡೆಯಲಿದೆ. ಮುಂದಿನ ವರ್ಷದ ಮಾರ್ಚ್‌ನಿಂದಲೇ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News