ಉಳ್ಳಾಲ ನಗರಸಭೆ ಕೌನ್ಸಿಲರ್ ಮೇಲೆ ಹಲ್ಲೆ: ದೂರು

Update: 2019-08-11 12:44 GMT

ಮಂಗಳೂರು, ಆ.11: ಉಳ್ಳಾಲ ನಗರಸಭೆಯ ಕೌನ್ಸಿಲರೊಬ್ಬರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ನಗರಸಭೆಯ ಕೌನ್ಸಿಲರ್ ಮುಸ್ತಾಕ್ ಪಟ್ಲ ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಇವರ ಮೇಲೆ ಜಲೀಲ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಪರೀತ ಮಳೆಯಿಂದ ಕಲ್ಲಾಪುವಿನಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಉಳ್ಳಾಲ ನಗರಸಭೆಯ ಪೌರ ಕಾರ್ಮಿಕರ ಜತೆ ಸ್ವಚ್ಛತೆಯ ಕಾರ್ಯವನ್ನು ಬಬ್ಬುಕಟ್ಟೆ ವಾರ್ಡ್ ಕೌನ್ಸಿಲರ್ ಮುಸ್ತಾಕ್ ನಿರ್ವಹಿಸುತ್ತಿದ್ದರು. ಈ ಸಂದರ್ಭ ಸಾಂಕ್ರಾಮಿಕ ರೋಗ ಬಾರದಂತೆ ತಡೆಗಟ್ಟುವ ದೃಷ್ಟಿಯಿಂದ ಔಷಧಿ ಸಿಂಪಡಿಸುತ್ತಿದ್ದ ವೇಳೆ ಮಗುವಿನ ಮೇಲೆ ಔಷಧಿ ಬಿದ್ದಿದೆ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಆರೋಪಿ ಜಲೀಲ್ ಎಂಬಾತ ಮುಶ್ತಾಕ್ ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಗೊಳಗಾದ ಕೌನ್ಸಿಲರ್ ಮುಸ್ತಾಕ್ ಪಟ್ಲ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌ಡಿಪಿಐ ಖಂಡನೆ
ಕಲ್ಲಾಪು ಬಬ್ಬುಕಟ್ಟೆ ವಾರ್ಡಿನ ಪಕ್ಷೇತರ ಕೌನ್ಸಿಲರ್ ಇಂಜಿನಿಯರ್ ಮುಸ್ತಾಕ್ ಪಟ್ಲ ಅವರಿಗೆ ದೈಹಿಕ ಹಲ್ಲೆ ನಡೆದಿರುವ ಘಟನೆಯನ್ನು ಎಸ್‌ಡಿಪಿಐ ಉಳ್ಳಾಲ ನಗರ ಸಮಿತಿ ಮತ್ತು ಪಕ್ಷದ ಕೌನ್ಸಿಲರ್‌ಗಳು ಖಂಡಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಸ್ತಾಕ್ ಪಟ್ಲ ಅವರನ್ನು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್, ಎಸ್‌ಡಿಪಿಐ ಕೌನ್ಸಿಲರ್ ರಮೀಝ್ ಕೋಡಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ನೆರೆ ಪರಿಹಾರ ರಕ್ಷಣಾ ಕಾರ್ಯದಲ್ಲಿ ನಿರತರಾದ ಮುಸ್ತಾಕ್ ಪಟ್ಲ ಅವರಿಗೆ ರಾಜಕೀಯ ವಿರೋಧಿಗಳು ಕುಮ್ಮಕ್ಕಿನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಎಸ್‌ಡಿಪಿಐ ಉಳ್ಳಾಲ ನಗರ ಸಮಿತಿಯು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News