ಮಳೆಗೆ ಸರಕಾರಿ ಶಾಲಾ ಕಟ್ಟಡ ಕುಸಿತ: 30 ಲಕ್ಷ ರೂ. ನಷ್ಟ

Update: 2019-08-11 12:47 GMT

ಬೈಂದೂರು, ಆ.11: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರ್ಗಾಲ್ ಗ್ರಾಮದ ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದು ಬಿದ್ದ ಘಟನೆ ರವಿವಾರ ನಸುಕಿನ ವೇಳೆ ನಡೆದಿದೆ.

105 ವರ್ಷ ಹಳೆಯ ಶತಮಾನ ಕಂಡ ಈ ಶಾಲೆಯ ಹಳೆಯ ಮೂರು ತರಗತಿ ಕೋಣೆಗಳ ಪೈಕಿ ನಡುವಿನ ಕೊಠಡಿಯ ಮಾಡು ಹಾಗೂ ಗೋಡೆ ಕುಸಿದು ಬಿದ್ದಿದೆ. ಅದಕ್ಕೆ ಸಂಬಂಧಿಸಿ ಇರುವ ಇತರ ಎರಡು ಕೊಠಡಿಗಳು ಕೂಡ ಇದೀಗ ಕುಸಿದು ಬೀಳುವ ಹಂತದಲ್ಲಿವೆ. ಮುಖ್ಯೋಪಾಧ್ಯಾಯರ ಕೊಠಡಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಶಾಲೆಯಲ್ಲಿ ಒಂದರಿಂದ ಐದನೆ ತರಗತಿವರೆಗೆ ಸುಮಾರು 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ರಾತ್ರಿ ವೇಳೆ ಕುಸಿದ ಪರಿಣಾಮ ಹಾಗೂ ಮಕ್ಕಳಿಗೆ ರಜೆ ಇರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎನ್ನಲಾಗಿದೆ. ಈ ಅನಾಹುತದಿಂದ ಶಾಲೆಯ ಕೆಲವು ಸೊತ್ತುಗಳಿಗೆ ಹಾನಿಯಾಗಿದ್ದು, ಒಟ್ಟು 30ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ತಹಶೀಲ್ದಾರ್ ಬಸಪ್ಪ ಪೂಜಾರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಬಿ., ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಜಗದೀಶ್ ದೇವಾಡಿಗ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಂದು ಕೊಠಡಿಗೆ ತಲಾ 10ಲಕ್ಷ ರೂ.ನಂತೆ ಒಟ್ಟು 30 ಲಕ್ಷ ರೂ. ಅಂದಾಜಿಸಲಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ಉಡುಪಿ ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆ.13ರಿಂದ ಶಾಲೆ ಆರಂಭಗೊಳ್ಳುವುದರಿಂದ ಇದೀಗ ಸಮೀಪದಲ್ಲೇ ಇರುವ ಅಂಗನವಾಡಿ ಕೇಂದ್ರದಲ್ಲಿ ಈ ಮಕ್ಕಳಿಗೆ ತರಗತಿ ನಡೆಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುವುದು.

-ಜ್ಯೋತಿ ಬಿ., ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು ವಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News