ರಕ್ಷಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಡಿಸಸ್ಟರ್ ಮ್ಯಾಪಿಂಗ್: ಎಸಿ ಡಾ.ಮಧುಕೇಶ್ವರ್

Update: 2019-08-11 12:56 GMT

ಕುಂದಾಪುರ, ಆ.11: ಉಡುಪಿ ಜಿಲ್ಲೆಯಾದ್ಯಂತ ರೆಡ್ ಆಲರ್ಟ್ ಮುಂದು ವರೆದಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೆರೆ ಸಂದರ್ಭ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಮಾಹಿತಿ ಯನ್ನು ಒಳಗೊಂಡ ‘ಡಿಸಸ್ಟರ್(ವಿಪತ್ತು) ಮ್ಯಾಪಿಂಗ್’ ಮಾಡಬೇಕು ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಎಸ್.ಎಸ್.ಮಧುಕೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರವಿವಾರ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದ ತುರ್ತು ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ನದಿ ತೀರ, ಪಶ್ಚಿಮ ಘಟ್ಟದ ತಪ್ಪಲು ಹಾಗೂ ನೆರೆ ಬಾಧಿತ ಪ್ರದೇಶಗಳಲ್ಲಿ ಏಕಾಏಕಿ ಮಳೆ ಹೆಚ್ಚಾದರೆ ತಕ್ಷಣ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಲು ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಓ ಗಳು, ಗ್ರಾಮ ಲೆಕ್ಕಿಗರು, ನೆರೆ ಪೀಡಿತ ಪ್ರದೇಶಗಳ ಮನೆಮಂದಿ, ಮಕ್ಕಳು, ಜಾನುವಾರು, ಬದಲಿ ಮಾರ್ಗ, ಪರ್ಯಾಯ ರಸ್ತೆ, ಸುರಕ್ಷತಾ ಮನೆಗಳು, ಸಮುದಾಯ ಭವನಗಳ ಕುರಿತ ವಿಪತ್ತು ಮ್ಯಾಪಿಂಗ್‌ನ್ನು ಎರಡು ದಿನಗಳಲ್ಲಿ ತಯಾರಿಸಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಎಲ್ಲ ಅಧಿಕಾರಿಗಳು ನೆರೆ ಪರಿಸ್ಥಿತಿಯನ್ನು ಆದ್ಯತೆ ನೆಲೆಯಲ್ಲಿ ನಿರ್ವಹಿಸ ಬೇಕು. ಬೇರೆ ಕಡೆಗಳಿಗೆ ಹೋಲಿಸಿದರೆ ಇಲ್ಲಿ ಹಾನಿ ಪ್ರಮಾಣ ಕಡಿಮೆ ಇದೆ. ಆದರೂ ರೆಡ್ ಆಲರ್ಟ್ ಇರುವುದರಿಂದ ಯಾವ ಸಂದರ್ಭದಲ್ಲಿ ಏನಾಗ ಬಹುದು ಎಂಬುದಾಗಿ ಹೇಳುವುದು ಕಷ್ಟ. ಹಾಗಾಗಿ ಎಲ್ಲ ಅಧಿಕಾರಿಗಳು ಸಾರ್ವಜನಿಕರು ಕರೆಯನ್ನು ಸ್ವೀಕರಿಸಿ ತಕ್ಷಣವೇ ಸ್ಪಂದಿಸಬೇಕು. ಯಾರು ಕೂಡ ತಮ್ಮ ಮೊಬೈಲ್‌ಗಳನ್ನು ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡಬಾರದು. ಮಾನವೀಯ ನೆಲೆಯಲ್ಲಿ ದಿನದ 24 ಗಂಟೆಗಳ ಕಾಲವೂ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸೂಚನೆ ನೀಡಿದರು.

ಕೆಲವು ಗ್ರಾಮ ಪಂಚಾಯತ್‌ಗಳಿಗೆ ಅಗತ್ಯ ಇರುವ ಲೈಫ್ ಜಾಕೆಟ್, ದೋಣಿ, ರಕ್ಷಣಾ ಕಾರ್ಯಕ್ಕೆ ಹಗ್ಗ ಸಹಿತ ಇನ್ನಿತರ ಸಲಕರಣೆಗಳನ್ನು ವಿತರಿಸು ವಂತೆ ಅಧಿಕಾರಿಗಳು ಸಭೆಯಲ್ಲಿ ಬೇಡಿಕೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇದನ್ನು ಆದ್ಯತೆ ನೆಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಡಿ ಒದಗಿಸಲು ತಹಶೀಲ್ದಾರ್‌ಗೆ ಸೂಚಿಸಲಾಗುವುದು ಎಂದರು.

ಕೃಷಿ, ತೋಟಗಾರಿಕಾ, ಮೀನುಗಾರಿಕಾ ಹಾಗೂ ರೇಷ್ಮೆ ಇಲಾಖೆಗಳ ಅಧಿ ಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಗಿರುವ ಹಾನಿಗಳ ಕುರಿತ ಸಮಗ್ರ ಮಾಹಿತಿ ಯನ್ನು ಕೂಡಲೇ ಸಂಗ್ರಹಿಸಿ, ನಷ್ಟದ ವೌಲ್ಯಮಾಪನ ಮಾಡಬೇಕು. ಇದರೊಂದಿಗೆ ಶಾಲೆಗಳು, ಆರೋಗ್ಯ ಕೇಂದ್ರ, ಮೆಸ್ಕಾಂ, ಅಂಗನವಾಡಿ ಕೇಂದ್ರ ಗಳಿಗೆ ಉಂಟಾಗಿರುವ ಹಾನಿಯ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕು ಎಂದು ಅವರು ಸೂಚಿಸಿದರು. ಸಭೆಯಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗಭೂಷಣ ಉಡುಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News