×
Ad

ಸಿರಿಬಾಗಿಲು: ಮಣ್ಣು ತೆರವು ಕಾರ್ಯಾಚರಣೆ- ಡಿಆರ್‌ಎಂ, ನೈಋತ್ಯ ರೈಲ್ವೆ ಅಧಿಕಾರಿಗಳ ಪರಿಶೀಲನೆ

Update: 2019-08-11 21:40 IST

ಮಂಗಳೂರು, ಆ.11: ಬಂಡೆ ತೆರವು ಕಾರ್ಯಾಚರಣೆ ಬಳಿಕ ಗುಡ್ಡ ಕುಸಿತದಿಂದ ಹಳಿಗೆ ಮಣ್ಣುಬಿದ್ದು ಕಳೆದ ಒಂದು ವಾರದಿಂದ ಬಂದ್ ಆಗಿರುವ ಸಿರಿಬಾಗಿಲು ಪ್ರದೇಶಕ್ಕೆ ಮೈಸೂರಿನ ರೈಲ್ವೆ ವಿಭಾಗೀಯ ಅಧಿಕಾರಿಗಳು ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿಆರ್‌ಎಂ ಅಪರ್ಣಾ ಗಾರ್ಗ್ ಮತ್ತು ನೈಋತ್ಯ ರೈಲ್ವೆ ಜನರಲ್ ಮೆನೇಜರ್ ಎ.ಕೆ.ಸಿಂಗ್ ಹಾಗೂ ಇಂಜಿನಿಯರ್‌ಗಳ ತಂಡ ಆಗಮಿಸಿ ಮಣ್ಣು ತೆರವು ಕಾರ್ಯಾಚರಣೆಯನ್ನು ವೀಕ್ಷಿಸಿತು. ಈ ಪ್ರದೇಶದಲ್ಲಿ ಭಾರೀ ಮಳೆಯ ಕಾರಣಕ್ಕೆ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಸ್ಥಗಿತಗೊಳಿಸಲಾಗಿತ್ತು.

ಸಕಲೇಶಪುರ ಬಳಿ ರೈಲು ಹಳಿಯಲ್ಲಿ ಮಣ್ಣಿನ ಸವೆತ ಕಂಡು ಬಂದಿದ್ದು, ಸೇತುವೆ ಹಾಗೂ ಇಳಿಜಾರು ಪ್ರದೇಶದಲ್ಲಿ ಕೂಡ ಭೂಕುಸಿತ ಸಂಭವಿಸಿತ್ತು. ಆದರೆ ಧಾರಾಕಾರ ಮಳೆಯಿಂದ ಹಾನಿಗೊಂಡ ಎಲ್ಲ ಕಡೆಗಳಲ್ಲಿ ದುರಸ್ತಿ ಕಾರ್ಯಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನುರಿತ ತಜ್ಞರನ್ನು ಕರೆಸಿಕೊಂಡು ಮಣ್ಣು ತೆರವು ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಿದ್ದಾರೆ.

ಇದೇ ಸಂದರ್ಭ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಮಿಕರಿಗೆ ರೈಲ್ವೆಯಿಂದ ಬ್ಲಾಂಕೆಟ್, ಕಂಬಳಿ ಮತ್ತಿತರ ಉಡುಪು, ಪರಿಕರಗಳನ್ನು ಅಧಿಕಾರಿಗಳು ವಿತರಿಸಿದರು.

ಈ ಮಾರ್ಗದಲ್ಲಿ ಸುಮಾರು 45 ಕಿ.ಮೀ. ವಿಸ್ತಾರದಲ್ಲಿ ಆ.5ರಿಂದ ಭೂಕುಸಿತ, ಬಂಡೆ, ಮರಗಳು ಹಳಿ ಮೇಲೆ ಬಿದ್ದಿರುವುದು ಸೇರಿದಂತೆ ಸುಮಾರು 40 ಘಟನೆಗಳು ವರದಿಯಾಗಿವೆ. ಹೆಚ್ಚುವರಿ ಯಂತ್ರಗಳನ್ನು ತರಿಸಲಾಗಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ಮಿಕರು ರೈಲು ಹಳಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಶ್ರಮಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಆ.22ರವರೆಗೆ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News