ಕೊಡಗು ಮಾದರಿಯಲ್ಲಿ ಪರಿಹಾರ ನೀಡಲು ಯು.ಟಿ.ಖಾದರ್ ಒತ್ತಾಯ.

Update: 2019-08-11 17:29 GMT

ಬೆಳ್ತಂಗಡಿ: ತಾಲೂಕಿನಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಅತ್ಯಂತ ಹೆಚ್ಚು ಹಾನಿಯಾಗಿದ್ದು ಬೆಳ್ತಂಗಡಿಯನ್ನು ಪ್ರಕೃತಿ ವಿಕೋಪ ಪೀಡಿತ ತಾಲೂಕು ಎಂದು ಘೋಷಿಸಬೇಕು ಹಾಗೂ ಕಳೆದ ವರ್ಷ ಕೊಡಗಿನಲ್ಲಿ ನೀಡಿದ ರೀತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಮಾಜಿ ಉಸ್ತುವಾರಿ ಸಚಿವ ಯು.ಟಿ ಖಾದರ್ ಒತ್ತಾಯಿಸಿದ್ದಾರೆ. 

ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳ್ತಂಗಡಿಯಲ್ಲಿ ಕೇವಲ ಪ್ರವಾಹ ಮಾತ್ರ ಬಂದಿಲ್ಲ. ಭಾರೀ ಪ್ರಮಾಣದಲ್ಲಿ ಭೂಕುಸಿತವೂ ಆಗಿದ್ದು ಅಪಾರ ನಷ್ಟ ಸಂಭವಿಸಿದೆ. ಇತರ ತಾಲೂಕುಗಳಿಗೆ ಹೋಲಿಸದೆ ಪ್ರತ್ಯೇಕ ಪರಿಹಾರ ನೀಡಬೇಕು ಕೂಡಲೇ ಎಲ್ಲವನ್ನೂ ಕಳೆದುಕೊಂಡಿರುವ ಜನರಿಗೆ ಅವರ ಅಗತ್ಯ ಖರ್ಚಿಗಾಗಿ ಕೊಡಗಿನಲ್ಲಿ ನೀಡಿದ ರೀತಿಯಲ್ಲಿ ಹಣ ನೀಡಬೇಕು. ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಲಾ ಹತ್ತು ಲಕ್ಷ ನೀಡಿ ಮನೆ ಕಟ್ಟಿಕೊಡಬೇಕು. ಭಾಗಶ ಹಾನಿಯಾದ ಮನೆಗಳಿಗೆ ಅಗತ್ಯಕ್ಕನುಗುಣವಾಗಿ ಪರಿಹಾರ ನೀಡಬೇಕು. ಕೃಷಿ ಕಳೆದುಕೊಂಡವರಿಗೂ ಅಗತ್ಯ ಪರಿಹಾರವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಬೆಳ್ತಂಗಡಿ ತಾಲೂಕಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ಮುಖ್ಯಮಂತ್ರಿಗಳಿಗೆ ವರದಿ ನೀಡುವುದಾಗಿ ಅವರು ತಿಳಿಸಿದರು.

ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News