ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತೆರೆದ ಮನೆ ಕಾರ್ಯಕ್ರಮ
ಉಡುಪಿ, ಆ.11: ಉಡುಪಿ ಜಿಲ್ಲಾ ಮಕ್ಕಳ ಸಹಾಯವಾಣಿ ವತಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ತೆರೆದಮನೆ ಕಾರ್ಯ ಕ್ರಮವನ್ನು ಇತ್ತೀಚೆಗೆ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಮಾತನಾಡಿ, ಮಕ್ಕಳ ನೆರವಿಗೆ ನಗರಸಭೆಯಿಂದ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ, ಜಿಲ್ಲೆಯಲ್ಲಿ 416 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದು, ಶಾಲಾ ಸಮಯದಲ್ಲಿ ಹೊರಗಡೆ ತಿರುಗುವ ಮಕ್ಕಳನ್ನು ಕಂಡರೆ ಶಾಲೆಗೆ ಯಾಕೆ ಹೋಗಲಿಲ್ಲ ಎಂದು ಪ್ರಶ್ನಿಸುವ ಮನೋಭಾವನೆಯನ್ನು ಪ್ರತಿ ಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು. ಡಾ.ಕೃಷ್ಣ ಐತಾಳ್ ಮಲೇರಿಯ, ಡೆಂಗ್ಯೊ ಜ್ವರದ ಬಗ್ಗೆ ಮಾಹಿತಿ ನೀಡಿ ದರು. ಶಿಶು ಆಭಿವೃದ್ಧಿ ಯೋಜನಾಧಿಕಾರಿ ವೀಣಾ, ನಗರ ಪೋಲಿಸ್ ಠಾಣೆ ಸಿಬ್ಬಂದಿ ಲೋಕೇಶ್ ಮಾತನಾಡಿದರು. ನಗರಸಭೆ ಸದಸ್ಯ ಚಂದ್ರಶೇಖರ್ ಯು., ಹಳೆ ವಿದ್ಯಾರ್ಥಿ ಅಣ್ಣಯ್ಯ ಶೇರಿಗಾರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ, ಮೆಸ್ಕಾಂ ಎಸ್‌ಇಇ ನರಸಿಂಹ ಪಂಡಿತ್, ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಮಚಂದ್ರ ಉಪಧ್ಯಾಯರು ಉಪಸ್ಥಿತರಿದ್ದರು.
ಮಕ್ಕಳಿಂದ ಅಧಿಕಾರಿಗಳಿಗೆ ದೂರು ತೆರದ ಮನೆ ಕಾರ್ಯಕ್ರಮದಲ್ಲಿ ಬಾಲನಿಕೇತನದ ವಠಾರದಲ್ಲಿ ಕಸ ಎಸೆಯು ವುದು, ಕಸ ವಿಲೆವಾರಿ ವಾಹನ ಬಾರದಿರುವುದು, ಕುಕ್ಕಿಕಟ್ಟೆ ಅಂಗನವಾಡಿಗೆ ಆವರಣ ಗೋಡೆ ಇಲ್ಲದಿರುವುದು, ಪರಿಸರದಲ್ಲಿ ರಾತ್ರಿ ಕಿಡಿಗೇಡಿಗಳಿಂದ ಮನೆಗಳಿಗೆ ಕಲ್ಲು ತೂರಾಟ, ಶಾಲೆ ಸಮೀಪ ವೇಗ ಮಿತಿಯ ಫಲಕ ಇಲ್ಲದಿರುವುದು, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಅಡಿಯಲ್ಲಿ ನೀರು ತುಂಬಿರುವುದು, ರಾತ್ರಿ ವೇಳೆ ವಾಹನದಲ್ಲಿ ಬಂದು ಕಸ ಎಸೆಯುವುದು, ದಾರಿದೀಪ ಅವ್ಯವಸ್ಥೆ, ರೈಲ್ವೆ ಬ್ರಿಡ್ಜ್ ಬಳಿ ಆಪಾಯಕಾರಿ ಮರದ ತೆರವಿಗೆ ಒತ್ತಾಯ ಹೀಗೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅಧಿಕಾರಗಳ ಗಮನಕ್ಕೆ ತಂದರು.