ದ.ಕ ಜಿಲ್ಲೆಯಲ್ಲಿ ಸರಳ ಬಕ್ರೀದ್ ಆಚರಣೆ

Update: 2019-08-12 13:58 GMT

ಮಂಗಳೂರು, ಆ. ೧೨:ಮುಸ್ಲಿಮರ ಎರಡನೇ ದೊಡ್ಡ ಹಬ್ಬವನ್ನು ಅತ್ಯಂತ ಸರಳವಾಗಿ  ಆಚರಿಸಲಾಯಿತು. ಮಂಗಳೂರು ನಗರ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬದಲ್ಲಿ ಸರಳವಾಗಿ ಬಕ್ರೀದ್ ಆಚರಿಸಲಾಯಿತು‌.

ಜಿಲ್ಲೆಯ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳಿಂದ ಈದ್ ಸಂದೇಶ ಸಹಿತ ಪ್ರವಚನ, ಪರಸ್ಪರ ಈದ್ ಶುಭಾಶಯ ವಿನಿಯಮ ನಡೆಯಿತು.

ಮಂಗಳೂರು ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತ್ಬಾ ಪ್ರವಚನ ನೀಡಿದರು.

‘ಏಕದೇವ ವಿಶ್ವಾಸದ ಸಮಾಜ ಸ್ಥಾಪನೆಗಾಗಿ ಪ್ರವಾದಿ ಇಬ್ರಾಹೀಮರು ಇಡೀ ಜೀವನವನ್ನೇ ಮುಡುಪಾಗಿರಿಸಿ, ಹಲವಾರು ಸವಾಲು ಸ್ವಪರೀಕ್ಷೆಗಳನ್ನು ಎದುರಿಸಿ, ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಸ್ವಂತ ಮಗನ ಬಲಿಯರ್ಪಿಸಲು ಹಿಂಜರಿದಿರಲಿಲ್ಲ. ಅವರ ಜೀವನ ಎಲ್ಲರಿಗೂ ಮಾದರಿಯಾಗಲಿ. ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸುವಂತೆ’ ಎಂದು ಖಾಝಿ ತಮ್ಮ ಪ್ರವಚನದಲ್ಲಿ ಹೇಳಿದರು. ಶಾಸಕ ಯು.ಟಿ.ಖಾದರ್, ಶುಭ ಹಾರೈಸಿದರು.

ಕುದ್ರೊಳಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರು ಮುಫ್ತಿ ಮನ್ನಾನ್ ಸಾಹೇಬ್ ಅವರ ನೇತೃತ್ವದಲ್ಲಿ ನಮಾಝ್, ಪ್ರವಚನ ನಡೆಯಿತು. ಮಂಗಳೂರು ವಾಸ್‌ಲೇನ್‌ನ ಮಸ್ಜಿದುಲ್ ಎಹ್ಸಾನ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದ್ ನೂರ್, ಸಿಟಿ ಬಸ್ ನಿಲ್ದಾಣ ಸಮೀಪದ ಇಬ್ರಾಹಿಂ ಖಲೀಲ್, ಬಂದರ್‌ನ ಕಚ್ಚಿ ಮಸ್ಜಿದ್ ಸಹಿತ ವಿವಿಧೆಡೆ ನಮಾಝ್ ನಡೆಯಿತು.

ಮಂಗಳೂರಿನ ಬಾವುಟಗುಡ್ಡೆ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಮಾಜಿ ಸಚಿವ, ಶಾಸಕ ಯುಟಿ ಖಾದರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಯುಟಿ ಖಾದರ್,  ನೆರೆ ಬಂದು ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಇನ್ಮುಂದೆ ಇಂತಹ ಅನಾಹುತಗಳು ನಡೆಯದಿರಲಿ. ಎಲ್ಲರಿಗೂ ಸುಖ, ಶಾಂತಿ‌ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಿದ್ದೇವೆಎಂದು ಹೇಳಿ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಶುಭಾಶಯ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News