ಪುತ್ತೂರು: ರಸ್ತೆ ಅಪಘಾತಕ್ಕೆ ಯುವಕ ಬಲಿ

Update: 2019-08-12 13:18 GMT

ಪುತ್ತೂರು, ಆ.12: ಕೆಎಸ್ಸಾರ್ಟಿಸಿ ಬಸ್ಸೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದು, ಕಾರು ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಸ್ತೆಯಲ್ಲಿನ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. 

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ನಿವಾಸಿ ಕುಂಞಿ ಮಾಹಿಮ್ ಎಂಬವರ ಪುತ್ರ ಅಬ್ದುಲ್ ಹಕೀಂ(24) ಮೃತಪಟ್ಟ ಕಾರು ಚಾಲಕ.

ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಹಕೀಂ ಅವರು ತನ್ನ ಮಾರುತಿ ಝೆನ್ ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಪೋಳ್ಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಧರಿತ್ರಿ ಎಂಬ ಖಾಸಗಿ ಬಸ್ಸು ಕಾರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಕಾರು ಚಲಾಯಿಸುತ್ತಿದ್ದ ಅಬ್ದುಲ್ ಹಕೀಂ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಅಬ್ದುಲ್ ಹಕೀಂ ಅವರು ಅಬುದಾಬಿಯಲ್ಲಿ ಉದ್ಯೋಗದಲ್ಲಿದ್ದು ಕಳೆದ 15 ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದರು. ಸೋಮವಾರ ಬಕ್ರೀದ್ ಹಬ್ಬದ ಹಿನ್ನಲೆಯಲಿ ತನ್ನ ಸಂಬಂಧಿಕರ ಮನೆಗೆ ಹೋಗಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಮೃತ ಹಕೀಂ ಅವರಿಗೆ ವಿವಾಹ ನಿಗದಿಯಾಗಿದ್ದು ಸಪ್ಟಂಬರ್ ತಿಂಗಳಿನಲ್ಲಿ ವಿವಾಹ ನಡೆಯಲಿತ್ತು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಬಸ್ಸಿನ ಹಿಂಭಾಗದ ಗಾಜು ಹುಡಿಯಾಗಿದೆ.

ಮೃತರು ತಂದೆ, ತಾಯಿ ಮೂವರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News