ಬಂಟ್ವಾಳ ತಾಲೂಕಿನಲ್ಲಿ ನೆರೆ, ಮಳೆ ಹಾನಿ: ಹೆಚ್ಚಿನ ಪರಿಹಾರ ಒದಗಿಸಲು ಶಾಸಕರಿಂದ ಮುಖ್ಯಮಂತ್ರಿಗೆ ಮನವಿ

Update: 2019-08-12 15:58 GMT

ಬಂಟ್ವಾಳ, ಆ. 12: ಬಂಟ್ವಾಳ ತಾಲೂಕಿನಲ್ಲಿ ನೆರೆ ಮತ್ತು ಮಳೆ ಹಾನಿಯಿಂದ 30 ಕೋ.ರೂ.ಗಳಷ್ಟು ನಷ್ಟ ಉಂಟಾಗಿದ್ದು, ಇದಕ್ಕೆ ಹೆಚ್ಚಿನ ಪರಿಹಾರ ಧನ ಒದಗಿಸುವಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಲಾಯಿತು. 

ದ.ಕ.ಜಿಲ್ಲಾ ಪ್ರವಾಸ ನಡೆಸಿದ ರಾಜ್ಯದ ಮುಖ್ಯಮಂತ್ರಿಗಳು ಬೆಳ್ತಂಗಡಿ ತಾಲೂಕಿನಿಂದ ಹಿಂತಿರುಗುವ ವೇಳೆ ಬಂಟ್ವಾಳ ಬೈಪಾಸ್ ಜಂಕ್ಷನ್‍ನಲ್ಲಿ ಸಿಎಂ ಅವರನ್ನು ಸ್ವಾಗತಿಸಿದ ಬಿಜೆಪಿಯ ಕಾರ್ಯಕರ್ತರು ಬಳಿಕ ಶಾಸಕರ ನೇತೃತ್ವದಲ್ಲಿ ಮನವಿ ನೀಡಿದರು.

ಬಳಿಕ ಮಾತನಾಡಿದ ಸಿಎಂ ಅವರು, ಮಳೆಹಾನಿಯಿಂದ ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂ, ಜತೆಗೆ ಸಂತ್ರಸ್ಥರು ಮನೆ ನಿರ್ಮಿಸುವವರೆಗೆ ಬಾಡಿಗೆ ಮನೆಯಲ್ಲಿದ್ದರೆ 5 ಸಾವಿರ ರೂ.ಬಾಡಿಗೆ, ಸಂತ್ರಸ್ಥರಿಗೆ ತತ್‍ಕ್ಷಣಕ್ಕೆ 10 ಸಾವಿರ ರೂ. ನೀಡಲಾಗುತ್ತದೆ ಎಂದು ತಿಳಿಸಿದರು. 

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಬಂಟ್ವಾಳದ ಹಾನಿಯ ಕುರಿತಂತೆ ಸಂಪೂರ್ಣ ದಾಖಲೆಗಳನ್ನೊಳಗೊಂಡು 30 ಕೋ.ರೂ.ಪರಿಹಾರ ಮೊತ್ತದ ಬೇಡಿಕೆ ಸಲ್ಲಿಸಲಾಗಿದ್ದು, ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಸಣ್ಣಪುಟ್ಟ ಅಂಗಡಿಯವರಿಗೂ ಪರಿಹಾರ ನೀಡಲು ಮನವಿಯಲ್ಲಿ ತಿಳಿಸಲಾಗಿದೆ ಎಂದರು.

ಸಂಸದ ನಳಿನ್‍ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಮುಖರಾದ ಎ.ಗೋವಿಂದ ಪ್ರಭು, ಪ್ರಕಾಶ್ ಅಂಚನ್, ಉದಯಕುಮಾರ್ ರಾವ್, ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಹಿತ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News