ಮಣಿಪಾಲ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

Update: 2019-08-12 17:15 GMT

ಉಡುಪಿ, ಆ.12: ಮೂರು ದಿನಗಳ ಹಿಂದೆ ಆ.9ರ ರಾತ್ರಿ 1:15ರ ಸುಮಾರಿಗೆ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಸಗ್ರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಮೂಡುಸಗ್ರಿ ನಿವಾಸಿ ನರಸಿಂಹ ನಾಯಕ್ ಎಂಬವರನ್ನು ಅಡ್ಡಗಟ್ಟಿ ಅವರಲ್ಲಿದ್ದ ಲಕ್ಷಾಂತರ ರೂ.ವೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಣಿಪಾಲ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಕಟಪಾಡಿ ವಿನೋಬಾನಗರ ನಿವಾಸಿ ಆತೀಶ್ ಡಿಸಿಲ್ವಾ(22), ಕಟಪಾಡಿ ಕುರ್ಕಾಲ್ ನಿವಾಸಿ ಪ್ರೇಮನಾಥ್ ರೇವ್(19), ತೆಂಕನಿಡಿಯೂರು ಗ್ರಾಮ ಕೊಡವೂರು ಈಶ್ವರನಗರ ನಿವಾಸಿ ಯೊಗೀಶ್(19), ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ಆರೂರು ಬಂಗ್ಲೆಗುಡ್ಡೆ ನಿವಾಸಿ ಸಂದೇಶ್(18) ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸಹಿತ ಒಟ್ಟು 5 ಜನ ಆರೋಪಿತರನ್ನು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕೆ.ಟಿ.ಎಂ ಬೈಕ್ 1, ಡಿ.ವೋ ಸ್ಕೂರ್ಟ 1 ಹಾಗೂ ವಿವೋ ಮೊಬೈಲ್ ಹಾಗೂ ನರಸಿಂಹ ನಾಯಕ್ ಅವರ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಇವರೆಲ್ಲ ಸೇರಿ ನರಸಿಂಹ ನಾಯಕ್‌ರನ್ನು ಅಡ್ಡಗಟ್ಟಿ ಮರದ ಸೋಟೆಯಿಂದ ಎಡಕಾಲಿಗೆ ಹೊಡೆದು, ಬಳಿಕ ಅವರ ಹೆಲ್ಮೆಟ್ ತೆಗೆದು ಹಣೆಗೆ ಹೊಡೆದಿದ್ದು, ಅವರಿಂದ 24 ಗ್ರಾಂ ತೂಕದ 70,000ರೂ.ವೌಲ್ಯದ ಚಿನ್ನದ ಸರ, 29,000ರೂ. ವೌಲ್ಯದ ಮೊಬೈಲ್ ಹಾಗೂ ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಸಹಿತ 31,000ರೂ.ನಗದು ಇದ್ದ ಪರ್ಸ್‌ನ್ನು ಸುಲಿಗೆ ಮಾಡಿರುವುದಾಗಿ ನಾಯಕ್ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಾಲಕಿ ಚುಡಾವಣೆ ಪ್ರಕರಣ ಬಯಲು!

ಬಂಧಿತರು ವಿಚಾರಣೆಯ ವೇಳೆ ಮಣಿಪಾಲ ಠಾಣೆಯಲ್ಲೇ ದಾಖಲಾದ ಇನ್ನೊಂದು ಪ್ರಕರಣವನ್ನು ತಾವೇ ಎಸಗಿದ್ದಾಗಿ ಒಪ್ಪಿಕೊಂಡ ಘಟನೆಯೂ ನಡೆದಿದೆ. ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಚುಡಾವಣೆ ಪ್ರಕರಣವನ್ನು ತಾವೇ ಎಸಗಿದ್ದಾಗಿ ಬಂಧಿತ ಆರೋಪಿಗಳಾದ ಅತೀಶ್ ಡಿಸಿಲ್ವಾ, ಸಂದೇಶ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಶೀಘ್ರ ಪತ್ತೆಗಾಗಿ ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಅರ್ ಜೈಶಂಕರ್ ಮಾಗದರ್ಶನದಂತೆ ಮಣಿಪಾಲ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಸಂಪತ್‌ಕುಮಾರ್, ಪೊಲೀಸ್ ಉಪನಿರೀಕ್ಷಕ ಶ್ರೀಧರ ನಂಬಿಯಾರ್, ಎಸ್ಸೈ ಉಮೇಶ್ ಜೋಗಿ, ದಿವಾಕರ್ ಶರ್ಮಾ, ಸಿಬ್ಬಂದಿಗಳಾದ ಅಬ್ದುಲ್ ರಜಾಕ್, ಪ್ರಸನ್ನ ಕುಮಾರ್, ಥೋಮ್ಸನ್, ಪ್ರವೀಣ, ಸಂತೋಪ್ ಹಾಗೂ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News