ಹೆಮ್ಮೆಯಿಂದ ಗಸ್ತು ನಿರ್ವಹಿಸಿ: ಕಮಿಷನರ್ ಡಾ.ಹರ್ಷ

Update: 2019-08-13 14:40 GMT

ಮಂಗಳೂರು, ಆ.13: ಜನರು ಮತ್ತು ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸಿಬ್ಬಂದಿ ‘ಗಸ್ತು ನನ್ನ ಹೆಮ್ಮೆ’ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷ ಪಿ.ಎಸ್. ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಕಮಿಷನರೇಟ್ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪೊಲೀಸ್ ಠಾಣೆಯನ್ನು ಮತ್ತಷ್ಟು ಸುದೃಢವಾಗಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ. ಗಸ್ತು ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನಸ್ನೇಹಿಯಾಗೋಣ ಎಂದು ಹೇಳಿದರು.

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಮಾಡುವ ರೌಡಿ ಶೀಟರ್‌ಗಳು, ಕಿಡಿಗೇಡಿಗಳ ಮೇಲೆ ಸದಾ ಕಣ್ಗಾವಲಿಟ್ಟು ಕಾರ್ಯಾಚರಿಸಬೇಕಾಗಿದ್ದು ಅವರ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಬೇಕಾಗಿದೆ. ಇದು ಮಾತ್ರವಲ್ಲದೆ, ಡ್ರಗ್ ಮಾಫಿಯಾ ನಗರದಲ್ಲಿ ದೊಡ್ಡ ಮಟ್ಟದಲ್ಲಿದ್ದು ಅದನ್ನು ಸಂಪೂರ್ಣ ಮಟ್ಟಹಾಕಲು ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಠಿಣ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು ಹೇಳಿದರು.

ಡ್ರಗ್ಸ್ ದಂಧೆ ಮಟ್ಟ ಹಾಕಲು ಸಿದ್ಧ

ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡ್ರಗ್ಸ್ ಹಾವಳಿ ಯುವ ಜನಾಂಗದ ದಾರಿಯನ್ನು ತಪ್ಪಿಸುತ್ತಿದೆ. ಇತ್ತೀಚೆಗೆ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಪೊಲೀಸ್ ವ್ಯವಸ್ಥೆಯನ್ನು ಠಾಣಾ ಹಂತದಲ್ಲಿ ಮತ್ತಷ್ಟು ಬಲಪಡಿಸಲು, ಎಲ್ಲ ಹಂತಗಳಲ್ಲಿ ಜನಸ್ನೇಹಿ ಆಡಳಿತ ನಡೆಸಲು ಆದ್ಯತೆ ನೀಡಲಾಗುವುದು. ಸಂಘಟಿತ ಅಪರಾಧ ಮಟ್ಟ ಹಾಕುವ ಬಗ್ಗೆ ಈ ಹಿಂದಿನ ಆಯುಕ್ತರ ಮಾದರಿಯಲ್ಲೇ ಕ್ರಮ ವಹಿಸಲಾಗುವುದು. ರೌಡಿ ಚಟುವಟಿಕೆಯನ್ನು ಹತ್ತಿಕ್ಕಲು ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಇದ್ದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಖಡಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅಕ್ರಮ ದನ ಸಾಗಣೆ, ಗಾಂಜಾ ಮಾರಾಟಗಾರರಿಗೆ ಕಡಿವಾಣ ಹಾಕಿದ್ದರು. ರೌಡಿಶೀಟರ್‌ಗಳಲ್ಲಿ ಭಯ ಹುಟ್ಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಗಾವಹಿಸಿ ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸಿ, ಅದಕ್ಕೆ ತಕ್ಕಂತೆ ಕಾನೂನು ರೀತಿಯ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಇದರ ಜೊತೆಗೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕವೂ ಜನಪ್ರಿಯರಾಗಿದ್ದರು. ಹೀಗಾಗಿ ನೂತನ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಇದೇ ರೀತಿಯಾಗಿ ಕಾರ್ಯ ನಿರ್ವಹಿಸಲಿ ಎನ್ನುವುದು ಸಾರ್ವಜನಿಕರ ಬಯಕೆಯಾಗಿದೆ.

ಸಭೆಯಲ್ಲಿ ಮಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತ ಅರುಣಾಂಷು ಗಿರಿ, ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News