ಬಿಜೆಪಿ ಶಾಸಕ ಸೋಮ್ ವಿರುದ್ಧದ ಪ್ರಕರಣ ಹಿಂದೆಗೆಯಲು ಆದಿತ್ಯನಾಥ್ ಸರಕಾರ ಸಜ್ಜು

Update: 2019-08-13 15:45 GMT

ಲಕ್ನೋ, ಆ.13: ಮುಝಫ್ಫರ್‌ನಗರ ದಂಗೆಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಬಿಜೆಪಿ ಶಾಸಕ ಸಂಗೀತ ಸೋಮ್ ವಿರುದ್ಧದ ಪ್ರಕರಣಗಳ ಹಿಂದೆಗೆತಕ್ಕೆ ನಾಂದಿ ಹಾಡುವ ಉಪಕ್ರಮಗಳನ್ನು ಉತ್ತರ ಪ್ರದೇಶದ ಆದಿತ್ಯನಾಥ ಸರಕಾರವು ಆರಂಭಿಸಿದೆ.

2013-2017ರ ನಡುವೆ ಸೋಮ್ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳ ಸ್ಥಿತಿಗತಿ ವರದಿಗಳನ್ನು ಸಲ್ಲಿಸುವಂತೆ ರಾಜ್ಯದ ಕಾನೂನು ಇಲಾಖೆಯು ಮಂಗಳವಾರ ಅಧಿಕಾರಿಗಳಿಗೆ ಲಿಖಿತ ಸೂಚನೆಯನ್ನು ನೀಡಿದೆ. ಈ ಪೈಕಿ ಮೂರು ಪ್ರಕರಣಗಳು 2013ರ ಮುಝಫ್ಫರ್‌ನಗರ ದಂಗೆಗಳಿಗೆ ಸಂಬಂಧಿಸಿವೆ. ಈ ದಂಗೆಗಳಲ್ಲಿ 60ಕ್ಕೂ ಅಧಿಕ ಜನರು ಪ್ರಾಣಗಳನ್ನು ಕಳೆದುಕೊಂಡಿದ್ದರು.

ಮುಝಫ್ಫರ್‌ನಗರ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸೋಮ್ ಸುಳ್ಳು ಸುದ್ದಿ ಹರಡುವಿಕೆ,ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ,ಒಳಸಂಚು ಮತ್ತು ದಂಗೆ ಆರೋಪಗಳನ್ನು ಎದುರಿಸುತ್ತಿದ್ದಾರೆ.

‘ಪ್ರಕರಣಗಳ ಹಿಂದೆಗೆತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳ ಹೆಸರುಗಳು,ವಿಚಾರಣೆಯ ಹಂತ,ದೂರುದಾರರು ಮತ್ತು ಆರೋಪಿಗಳ ವಿವರಗಳು ಇತ್ಯಾದಿ 13 ಅಂಶಗಳ ಆಧಾರದಲ್ಲಿ ವರದಿಯನ್ನು ಸಿದ್ಧಗೊಳಿಸುವಂತೆ ನಮಗೆ ಸೂಚಿಸಲಾಗಿದೆ ’ಎಂದು ಮುಝಫ್ಫರ್‌ನಗರದ ಹಿರಿಯ ಸರಕಾರಿ ಅಧಿಕಾರಿ ಅಮಿತ್ ಕುಮಾರ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಕರಣವೊಂದರ ಬಗ್ಗೆ ಕಾನೂನು ಇಲಾಖೆಯು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಸರಕಾರವು ಅದನ್ನು ಹಿಂದೆಗೆದುಕೊಳ್ಳಲು ಬಯಸಿದರೆ ಅದು ಪ್ರಕರಣದ ವಿಚಾರಣೆ ನಡೆಯುತ್ತಿರುವ ಅಥವಾ ಪ್ರಕರಣ ಬಾಕಿಯಿರುವ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ನ್ಯಾಯಾಲಯದ ನಿರ್ಧಾರವು ಅಂತಿಮವಾಗಿರುತ್ತದೆ.

ಪಶ್ಚಿಮ ಉತ್ತರ ಪ್ರದೇಶದ ಸರಧನಾ ಶಾಸಕರಾಗಿರುವ ಸೋಮ್ ತನ್ನ ಹೇಳಿಕೆಗಳು ಮತ್ತು ಮುಝಫ್ಫರ್‌ನಗರ ದಂಗೆಗಳಲ್ಲಿ ತನ್ನ ಪಾತ್ರದ ಕುರಿತು ಆರೋಪಗಳಿಂದಾಗಿ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ.

ಆದಿತ್ಯನಾಥ್ ಸರಕಾರವು 2017ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮುಝಫ್ಫರ್‌ನಗರಕ್ಕೆ ಸಂಬಂಧಿಸಿದ 100ಕ್ಕೂ ಅಧಿಕ ಪ್ರಕರಣಗಳ ಸಮಾಪನ ಕುರಿತು ಶಿಫಾರಸುಗಳನ್ನು ಕೋರಿದ್ದು,ಈ ಪೈಕಿ ಕನಿಷ್ಠ 74 ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ನ್ಯಾಯಾಲಯದ ಅನುಮತಿಯನ್ನು ಕೋರಿಕೊಂಡಿತ್ತು. ಆದರೆ ಈ ಎಲ್ಲ ಕೋರಿಕೆಗಳು ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News