ನಮ್ಮ ಸ್ವಾಗತಕ್ಕೆ ಭದ್ರತಾ ಮಂಡಳಿ ಹಾರ ಹಿಡಿದು ಕಾಯುವುದಿಲ್ಲ: ಪಾಕ್ ವಿದೇಶ ಸಚಿವ

Update: 2019-08-13 15:59 GMT

ಇಸ್ಲಾಮಾಬಾದ್, ಆ. 13: ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತದ ನಿರ್ಧಾರವನ್ನು ಪ್ರಶ್ನಿಸಲು ಹೋಗುವ ಪಾಕಿಸ್ತಾನವನ್ನು ಸ್ವಾಗತಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ‘ಹೂಹಾರಗಳನ್ನು ಹಿಡಿದುಕೊಂಡು ಕಾಯುತ್ತದೆ’ ಎಂಬ ಕಲ್ಪನೆಯನ್ನು ಇಟ್ಟುಕೊಳ್ಳುವುದು ಬೇಡ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಪಾಕಿಸ್ತಾನೀಯರಿಗೆ ಹೇಳಿದ್ದಾರೆ.

‘‘ಭಾವನೆಗಳನ್ನು ಹೊರಹಾಕುವುದು ಸುಲಭ. ಆಕ್ಷೇಪಗಳನ್ನು ವ್ಯಕ್ತಪಡಿಸುವುದು ಇನ್ನೂ ಸುಲಭ. ಆದರೆ, ವಿಷಯವನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ಕಷ್ಟ. ಅವರು ಕೈಯಲ್ಲಿ ಹೂಹಾರಗಳನ್ನು ಹಿಡಿದುಕೊಂಡು ನಮಗಾಗಿ ಕಾಯುತ್ತಾ ಕುಳಿತಿಲ್ಲ. ಪಿ-5 (ಭದ್ರತಾ ಮಂಡಳಿಯ ಖಾಯಂ ಸದಸ್ಯ ದೇಶಗಳು) ದೇಶಗಳ ಪೈಕಿ ಯಾವುದೇ ದೇಶವು ನಮಗೆ ಅಡ್ಡಗಾಲು ಹಾಕಬಹುದು. ನಾವು ಮೂರ್ಖರ ಸ್ವರ್ಗದಲ್ಲಿ ವಾಸಿಸುವುದು ಬೇಡ’’ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಸಚಿವರು ಹೇಳಿದರು. ಈ ಪತ್ರಿಕಾಗೋಷ್ಠಿಯು ಪಿಟಿವಿಯಲ್ಲಿ ಪ್ರಸಾರಗೊಂಡಿತು.

ಭಾರತೀಯ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವ ಭಾರತದ ಕ್ರಮವನ್ನು ಖಾಯಂ ಸದಸ್ಯ ದೇಶಗಳ ಪೈಕಿ ಒಂದಾದ ರಶ್ಯವು ಬೆಂಬಲಿಸಿದ ಬಳಿಕ ಪಾಕಿಸ್ತಾನ ವಿದೇಶ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ಭಾರತ ತೆಗೆದುಕೊಂಡಿರುವ ಎಲ್ಲ ಕ್ರಮಗಳು ಸಂವಿಧಾನದ ಚೌಕಟ್ಟಿನಲ್ಲಿವೆ ಎಂದು ರಶ್ಯ ಹೇಳಿದೆ.

ಈ ವಿಷಯದಲ್ಲಿ ಅಮೆರಿಕವು ತಟಸ್ಥವಾಗಿದ್ದು, ಯಾವುದೇ ಪಕ್ಷದ ಪರವಾಗಿ ನಿಂತಿಲ್ಲ.

ಚೀನಾ ಮಾತ್ರ ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News