ಆದಿಉಡುಪಿಯಿಂದ ಕಡಿಯಾಳಿವರೆಗಿನ ಭೂಸ್ವಾಧೀನ ಪ್ರಕ್ರಿಯೆ ರದ್ದು

Update: 2019-08-13 16:47 GMT

ಉಡುಪಿ, ಆ.13: ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು, ಶಾಸಕ ಕೆ.ರಘುಪತಿ ಭಟ್ ಹಾಗೂ ಉಡುಪಿ ನಗರಸಭಾ ಅಧಿಕಾರಿಗಳು ಇಂದು ಆದಿಉಡುಪಿಯಿಂದ ಪರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕುರಿತು ಸ್ಥಳ ಪರಿಶೀಲನೆ ನಡೆಸಿದರು.

ಹೆಚ್ಚಿನ ಭೂಮಿ ಕಳೆದುಕೊಳ್ಳುವವರು ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಈ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆದಿಉಡುಪಿಯಿಂದ ಕಡಿಯಾಳಿ ಯವರೆಗೆ 30 ಮೀಟರ್ ಅಗಲೀಕರಣ ಮಾಡುವ ನೋಟಿಫಿಕೇಶನನ್ನು ರದ್ದು ಪಡಿಸಿ, ಈ ಹಿಂದಿನಂತೆ ರಸ್ತೆಯನ್ನು 80 ಅಡಿಗೆ ಕಾಯ್ದುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಬನ್ನಂಜೆ ನಾರಾಯಣಗುರು ಜಂಕ್ಷನ್, ಸಿಟಿ ಬಸ್ ನಿಲ್ದಾಣ ಮತ್ತು ಕಲ್ಸಂಕ ಜಂಕ್ಷನ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯ ಯೋಜನೆ ಪ್ರಕಾರ ಭೂಸ್ವಾಧೀನ ನಡೆಸಿ ಅಗಲೀಕರಣ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಉಳಿದಂತೆ ಆದಿಉಡುಪಿಯಿಂದ ಕಡಿಯಾಳಿವರೆಗಿನ ರಸ್ತೆಯನ್ನು 80 ಅಡಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಬಗ್ಗೆ ಸ್ಥಳ ಪರಿಶೀಲನೆ ಸಂದರ್ಭ ನಿರ್ಧರಿಸಲಾಯಿತು.

ಪರ್ಕಳ ಹೈಸ್ಕೂಲಿನಿಂದ ಪೇಟೆಯವರೆಗೆ ಸುಮಾರು ಒಂದೂವರೆ ಮೀಟರ್ ರಸ್ತೆಯನ್ನು ಸ್ಥಳ ಪರಿವರ್ತನೆ ಮಾಡುವುದು ಮತ್ತು ಖಾಸ್ತ ಭೂಮಿಯನ್ನು ಭೂಸ್ವಾಧೀನ ಪಡಿಸದೆ ಸರಕಾರಿ ಜಾಗದಲ್ಲೇ ರಸ್ತೆಯನ್ನು ಅಭಿವೃದ್ಧಿಪಡಿಸುವ ಕುರಿತು ತೀರ್ಮಾನಿಸಲಾಯಿತು. ಪರ್ಕಳ ಪೇಟೆಯಿಂದ ಕಡಿಯಾಳಿ(ಓಶಿ ಯನ್ ಪರ್ಲ್)ಯವರೆಗಿನ ರಸ್ತೆಯನ್ನು ಈಗಿರುವಂತೆ 30 ಮೀಟರ್ ವರೆಗೆ ಭೂಸ್ವಾಧೀನಪಡಿಸಿ ರಸ್ತೆ ಅಭಿವೃದ್ಧಿ ಮಾಡುವುದೆಂದು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.

ಈ. ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಸವರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್, ಸಹಾಯಕ ಅಭಿಯಂತರ ಮಂಜುನಾಥ್ ನಾಯಕ್ ಮತ್ತು ನಗರಸಭೆಯ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ, ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ಗಣೇಶ್, ಸದಸ್ಯರಾದ ಪ್ರಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ ಕಕ್ಕುಂಜೆ, ಅಶೋಕ ನಾಯ್ಕ, ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ್, ಸುಮಿತ್ರಾ ನಾಯಕ್, ಕಲ್ಪನಾ ಸುಧಾಮ, ವಿಜಯಲಕ್ಷ್ಮಿ, ಸುಂದರ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News