ಬಿರುಕು ಮತ್ತಷ್ಟು ಹೆಚ್ಚಳ: ಅಪಾಯದ ಅಂಚಿನಲ್ಲಿ ತೆಂಕಿಲ ಗುಡ್ಡ

Update: 2019-08-13 16:56 GMT

ಪುತ್ತೂರು: ತೆಂಕಿಲ ದರ್ಖಾಸು ಎಂಬಲ್ಲಿರುವ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗೇರು ತೋಟವಿರುವ ಗುಡ್ಡದಲ್ಲಿ ಕಾಣಿಸಿಕೊಂಡಿರುವ ಬಿರುಕು ಮಂಗಳವಾರ ಮತ್ತಷ್ಟು ಹೆಚ್ಚಳಗೊಂಡಿದ್ದು, ಮಣ್ಣಿನ ಪದರ ಕೆಳಭಾಗದಲ್ಲಿ ಕುಗ್ಗಿದೆ. ಬಿರುಕು ಅಗಲವಾಗಿರುವ ಹಿನ್ನಲೆಯಲ್ಲಿ ಅಪಾಯದ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ. ಈ ಭಾಗದ ಬಹುತೇಕ ಕುಟುಂಬಗಳು ಮನೆಯನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ಸ್ಥಳಾಂತರಗೊಂಡಿರುವ 11 ಕುಟುಂಬಗಳ ಪೈಕಿ ಇಬ್ಬರ ಮಕ್ಕಳ ಸಹಿತ 4 ಮಂದಿಯಿರುವ ಗಂಗಾಧರ್ ಕುಟುಂಬ, ಮಹಾಲಿಂಗ ಅವರ ಕುಟುಂಬದ 4 ಮಂದಿ, ಹಾಗೂ ಸತೀಶ್ ಅವರ ಕುಟುಂಬದ ಇಬ್ಬರು ಮಕ್ಕಳ ಸಹಿತ 5 ಮಂದಿಗೆ ಪುತ್ತೂರಿನ ನಗರಸಭೆಯ ಸಮುದಾಯಭವನ ದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಉಳಿದ ಕುಟುಂಬಗಳು ತಮ್ಮ ಸಂಬಂಧಿಕರ ಮನೆಯನ್ನು ಆಶ್ರಯಿಸಿಕೊಂಡಿವೆ.

ಸ್ಥಳಾಂತರಗೊಂಡ ಕುಟುಂಬಗಳ ಪೈಕಿ ಹೆಚ್ಚಿನ ಕುಟುಂಬಗಳು ಕೂಲಿ ಕಾರ್ಮಿಕ ಕುಟುಂಬಗಳಾಗಿವೆ. ಸಮುದಾಯ ಭವನದಲ್ಲಿ ಆಶ್ರಯ ಪಡೆದವರಲ್ಲಿ ಇಬ್ಬರು ಮಂಗಳವಾರ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗದೆ ಸಮುದಾಯ ಭವನದಲ್ಲಿಯೇ ಉಳಿದುಕೊಂಡಿದ್ದಾರೆ.

ಕಳೆದ ವಾರ ಪೂರ್ತಿ ಎಡಬಿಡದೆ ಮಳೆ ಸುರಿದಿತ್ತು. ಶನಿವಾರ ಸಂಜೆಯ ಬಳಿಕ ಮಳೆಯ ಪ್ರಮಾಣ ಇಳಿಮುಖವಾಗಿತ್ತು. ಗುಡ್ಡದಲ್ಲಿ ಬಿರುಕು ಕಾಣಸಿಕೊಂಡ ಬಳಿಕ ಅಪಾಯದ ಸೂಚನೆ ಲಭಿಸಿ, ಭೀತಿಯಲ್ಲಿದ್ದ ಅಲ್ಲಿನ ನಿವಾಸಿಗಳು ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣ, ಇನ್ನೇನೂ ದೊಡ್ಡ ಮಟ್ಟದ ಸಮಸ್ಯೆಯಾಗದು ಎಂದು ಭಾವಿಸಿದ್ದರು. ಆದರೆ ಸೋಮವಾರ ಸಂಜೆಯಿಂದ ಮತ್ತೆ ಬಿರುಕಿನ ಮಳೆ ಸುರಿಯತೊಡಗಿರುವುದು ಅಲ್ಲಿನ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ.

ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ 200 ಮೀಟರ್ ನಷ್ಟು ಉದ್ದವಾಗಿ ಕಾಣಿಸಿಕೊಂಡಿದ್ದ ಬಿರುಕು ಒಂದು ಇಂಚಿನಷ್ಟು ಅಗಲವಿತ್ತು. ಮಂಗಳವಾರದ ವೇಳೆಗೆ 3 ಇಂಚಿನಷ್ಟು ವಿಸ್ತಾರಗೊಂಡಿದೆ. ಅಲ್ಲದೆ ಮಣ್ಣಿನ ಕೆಳಭಾಗದ ಪದರವೂ 3 ಇಂಚಿನಷ್ಟು ಕೆಳಕ್ಕೆ ಸರಿದಿದೆ. ಗುಡ್ಡದ ಮೇಲ್ಭಾಗದ ತಪ್ಪಲಿನಲ್ಲಿಯೂ ನೇರವಾಗಿ ಹಾಗೂ ಅಡ್ಡವಾಗಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದೆ.

ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ,ಅಂತರ್‍ಜಲ ಪರಿಶೋಧಕಿ ವಸುಧಾ ಅವರು ಸೋಮವಾರ ಮಧ್ಯಾಹ್ನ ತೆಂಕಿಲ ಗುಡ್ಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭೂ ಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಅಪಾಯದ ಸೂಚನೆ ನೀಡಿದ ಹಿನ್ನಲೆಯಲ್ಲಿ ಅಲ್ಲಿನ 11 ಕುಟುಂಬಗಳ ಮನವೊಲಿಸಿ ಸ್ಥಳಾಂತರಿಸುವ ಕಾರ್ಯ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ರಾತ್ರಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News