ಅಂತ್ಯಸಂಸ್ಕಾರಕ್ಕೆ ಹಣದ ಕೊರತೆ: ಕಸದ ತೊಟ್ಟಿಯಲ್ಲಿ ತಾಯಿಯ ಮೃತದೇಹ ಇಟ್ಟ ವ್ಯಕ್ತಿ!

Update: 2019-08-13 17:17 GMT
ಸಾಂದರ್ಭಿಕ ಚಿತ್ರ

ಚೆನ್ನೈ, ಆ.13: ಬಡತನದಿಂದ ಕಂಗೆಟ್ಟಿದ್ದ ವ್ಯಕ್ತಿಯೊಬ್ಬ ತಾಯಿಯ ಮೃತದೇಹವನ್ನು ಕಸದ ತೊಟ್ಟಿಗೆ ಎಸೆದ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಎನ್ ವಾಸಂತಿ(50 ವರ್ಷ) ಎಂದು ಗುರುತಿಸಲಾಗಿದೆ. ಗಂಡನಿಂದ ದೂರವಾಗಿದ್ದ ಮಹಿಳೆ ಪುತ್ರ ಮುತ್ತು ಲಕ್ಷ್ಮಣನ್‌ನೊಂದಿಗೆ ವಾಸಿಸುತ್ತಿದ್ದರು. ನೆರೆಗ್ರಾಮದ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಮುತ್ತುಲಕ್ಷ್ಮಣನ್‌ಗೆ ದೊರಕುತ್ತಿದ್ದ ಅಲ್ಪ ಆದಾಯದಲ್ಲೇ ತಾಯಿಯ ಔಷಧೋಪಚಾರ ಹಾಗೂ ದೈನಂದಿನ ವೆಚ್ಚಕ್ಕೆ ಹಣ ಹೊಂದಿಸಲಾಗದೆ ಆತ ಕಂಗೆಟ್ಟಿದ್ದ. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ವಾಸಂತಿ ಮೃತಪಟ್ಟಿರುವ ವಿಷಯ ನೆರೆಮನೆಯವರಿಗೂ ತಿಳಿದಿರಲಿಲ್ಲ. ತಾಯಿಯ ಅಂತ್ಯಸಂಸ್ಕಾರಕ್ಕೆ ಹಣ ಹೊಂದಿಸಲಾಗದ ಮುತ್ತುಲಕ್ಷ್ಮಣನ್ ಮೃತದೇಹವನ್ನು ನಗರಪಾಲಿಕೆಯ ಕಸದತೊಟ್ಟಿಯಲ್ಲಿ ಬಿಸಾಡಿದ್ದ ಎನ್ನಲಾಗಿದೆ. ಸೋಮವಾರ

 ಈ ಘಟನೆ ನಡೆದಿದ್ದು ಮಂಗಳವಾರ ಕಸ ವಿಲೇವಾರಿ ಮಾಡುವ ಕಾರ್ಮಿಕರು ಕಸದ ತೊಟ್ಟಿಯಲ್ಲಿ ಮಹಿಳೆಯ ಮೃತದೇಹ ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ಸಂದರ್ಭ ಮುತ್ತುಲಕ್ಷ್ಮಣನ್ ತಪ್ಪೊಪ್ಪಿಕೊಂಡಿದ್ದು, ನಗರಪಾಲಿಕೆ ಸಿಬಂದಿ ಮೃತದೇಹದ ಅಂತ್ಯಸಂಸ್ಕಾರ ಮಾಡುತ್ತಾರೆ ಎಂದು ತಾನು ಭಾವಿಸಿರುವುದಾಗಿ ತಿಳಿಸಿದ್ದಾನೆ. ಈತ ಮುಂಜಾನೆ 4 ಗಂಟೆಗೆ ತಾಯಿಯ ಮೃತದೇಹವನ್ನು ಹೊತ್ತು ತಂದು ಕಸದ ತೊಟ್ಟಿಯಲ್ಲಿರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News