ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧ ತೆರವು ಯಾವಾಗ? : ಗೃಹ ಸಚಿವಾಲಯ ಹೇಳಿದ್ದು ಹೀಗೆ…

Update: 2019-08-13 17:18 GMT

ಹೊಸದಿಲ್ಲಿ, ಆ.13: ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ಪುನರ್‌ಪರಿಶೀಲಿಸಿ ಒಪ್ಪಿಗೆ ನೀಡಿದರೆ ಮಾತ್ರ ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಮಂಗಳವಾರ ಇಲ್ಲಿ ತಿಳಿಸಿದರು. ‘ಇದು ನಿರ್ಬಂಧಗಳಿಂದಾಗುತ್ತಿರುವ ಅನಾನುಕೂಲ ಮತ್ತು ಜೀವಗಳ ಹಾನಿಯ ನಡುವಿನ ಆಯ್ಕೆಯಾಗಿದೆ. ಕಾಶ್ಮೀರದಲ್ಲಿ ಪ್ರಜೆಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ನಮ್ಮ ಕಾಳಜಿಯಾಗಿದೆ’ ಎಂದೂ ಅವರು ಹೇಳಿದರು.

ಗೃಹ ಸಚಿವಾಲಯದ ಮೂಲಗಳಂತೆ ಕಾಶ್ಮೀರದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಬಂಧಗಳನ್ನು ಹೇರಲಾಗಿರುವುದು ಇದೇ ಮೊದಲ ಬಾರಿಯೇನಲ್ಲ.

2016ರಲ್ಲಿ ಹಿಝ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಅನಿಯಂತ್ರಿತ ಪ್ರತಿಭಟನೆಗಳಿಂದಾಗಿ ಹಲವಾರು ಜನರು ಜೀವಗಳನ್ನು ಕಳೆದುಕೊಂಡಿದ್ದರು. ಆಗ ನಿರ್ಬಂಧಗಳನ್ನು ಹೇರಲಾಗಿದ್ದು,ಅವು ತಿಂಗಳುಗಟ್ಟಲೆ ಮುಂದುವರಿದಿದ್ದವು. ಈ ಬಾರಿ ಹಿಂಸಾಚಾರ ಮತ್ತು ಜೀವಹಾನಿಯನ್ನು ಕನಿಷ್ಠಗೊಳಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಕಣಿವೆಯಲ್ಲಿನ ರಾಜಕೀಯ ಧುರೀಣರನ್ನು ಕಾನೂನುಬದ್ಧವಾಗಿ ಮತ್ತು ಸ್ಥಳೀಯ ಅಧಿಕಾರಿಗಳ ವರದಿಗಳ ಆಧಾರದಲ್ಲಿ ಬಂಧಿಸಲಾಗಿದೆ. ಅವರನ್ನು ಯಾವಾಗ ಬಿಡುಗಡೆಗೊಳಿಸಬೇಕು ಎನ್ನುವುದನ್ನು ಅಧಿಕಾರಿಗಳೇ ನಿರ್ಧರಿಸುತ್ತಾರೆ. ಬಂಧಿತರು ರಾಜಕೀಯ ಕೈದಿಗಳಲ್ಲ ಎಂದರು.

ತನ್ಮಧ್ಯೆ,ಕಣಿವೆಯಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸಲಾಗುತ್ತಿದೆ ಮತ್ತು ಜಮ್ಮು ವಿಭಾಗದಲ್ಲಿ ಸಹಜ ಸ್ಥಿತಿ ಮರಳಿದೆ ಎಂದು ಜಮ್ಮು-ಕಾಶ್ಮೀರ ಆಡಳಿತದ ವಕ್ತಾರ ರೋಹಿತ ಕನ್ಸಾಲ್ ಅವರು ಮಂಗಳವಾರ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News