ಭ್ರಷ್ಟಾಚಾರದ ಆರೋಪದ ತನಿಖೆಯಾಗಲಿ: ನಾಗವೇಣಿ

Update: 2019-08-14 12:00 GMT

ಮಂಗಳೂರು, ಆ.14: ಮನಪಾ ಕುಂಜತ್ತಬೈಲ್ 15ನೇ ವಾರ್ಡ್‌ನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪುಮಾಹಿತಿ ನೀಡಿ ಅಪಪ್ರಚಾರ ಮಾಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ವಾರ್ಡ್‌ನಲ್ಲಿ ನಡೆದ ಕಾಮಗಾರಿ ಬಗ್ಗೆ ಮನಪಾ ಆಯುಕ್ತರು ತನಿಖೆ ನಡೆಸಿ ವಿವರ ನೀಡಬೇಕು ಎಂದು ಮಾಜಿ ಕಾರ್ಪೋರೇಟರ್ ನಾಗವೇಣಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅಧಿಕಾರವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಾಟ್ಸಪ್, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ತಪ್ಪುಮಾಹಿತಿ ನೀಡಿ, ನಿಂದನೆ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದರು.

ಆರೋಪ ಮಾಡಿರುವ ಶಶಿಧರ ಶೆಟ್ಟಿ ಎಂಬವರು ಮನಪಾ ಆಯುಕ್ತರಿಗೂ ಯಾವುದೇ ದೂರು ನೀಡಿಲ್ಲ. ನಾನು ಯಾವುದೇ ಅವ್ಯವಹಾರ ನಡೆಸಿಲ್ಲ. ಅಧಿಕಾರಿಗಳು ತಪ್ಪು ಮಾಡಿದ್ದರೆ, ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ನಾನೂ ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ವಿನಾಕಾರಣ ಆರೋಪ ಮಾಡಿದ್ದ ಬಗ್ಗೆ ಮಾತನಾಡಲು ನಾನು ಶಶಿಧರ ಶೆಟ್ಟಿ ಅವರ ಮನೆಗೆ ತೆರಳಿದ್ದೆ. ಆದರೆ, ಮನೆಯಿಂದ ಹೊರಬಾರದ ಅವರು ಒಳಗಿನಂದಲೇ ನನ್ನ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಯಾರದ್ದೋ ಕುಮ್ಮಕ್ಕಿನಿಂದ ಅವರು ಈ ರೀತಿ ನಿಂನೆ ಮಾಡಿದ್ದಾರೆ ಎಂದು ಆಪಾದಿಸಿದರು.

ಅಶೋಕನಗರ ಜಂಕ್ಷನ್‌ನಲ್ಲಿ ರಿಕ್ಷಾ ಪಾರ್ಕ್ ಮೇಲ್ಛಾವಣಿಗೆ 5 ಲಕ್ಷ ರೂ. ಮಂಜೂರು ಮಾಡಿ ಬಿಲ್‌ನ್ನು ಚೆಕ್ ಮೂಲಕ ಪಡೆಯಲಾಗಿದೆ ಎಂದು ಶಶಿಧರ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಆದರೆ, ಈ ಕಾಮಗಾರಿಗೆ 1.16 ಲಕ್ಷ ರೂ. ಮಾತ್ರ ವೆಚ್ಚವಾಗಿದೆ. ಗುತ್ತಿಗೆದಾರರಿಗೆ ಈ ಮೊತ್ತ ಇನ್ನೂ ಪಾವತಿಯಾಗಿಲ್ಲ. ಹಾಗಾದರೆ ಶಶಿಧರ್ ಶೆಟ್ಟಿ ಹೇಳಿರುವಂತೆ 5 ಲಕ್ಷ ರೂ. ಚೆಕ್‌ನ್ನು ಯಾರಿಗೆ ಯಾರು ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕು. ಚಂಡಚಂಡೇಶ್ವರಿ ಬಾವಿ ಅಭಿವೃದ್ಧಿಯಲ್ಲಿ 4.5 ಲಕ್ಷ ರೂ. ಚೆಕ್ ಮೂಲಕ ಹಣ ಪಾವತಿಸಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ. ಈ ಬಾವಿ ಖಾಸಗಿ ಜಾಗದಲ್ಲಿರುವ ಕಾರಣ ಯೋಜನೆಯನ್ನೇ ಕೈಬಿಡಲಾಗಿದೆ ಎಂದರು.

ಡೊಮೆನಿಕ್ ಚರ್ಚ್‌ನ ತಡೆಗೋಡೆಗೆ 25 ಲಕ್ಷ ರೂ. ಬಿಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕಾಮಗಾರಿಗೆ 16.87 ಲಕ್ಷ ಬಿಲ್ ಮಾತ್ರ ಆಗಿದೆ. ಆಂಗ್ಲಮಾಧ್ಯಮ ಶಾಲೆಯ ಚರಂಡಿ ಸಹಿತ ರಸ್ತೆ ಕಾಮಗಾರಿಯನ್ನು ತೋರಿಸದೇ ಬೇರೊಂದು ರಸ್ತೆ ತೋರಿಸಿ ಕಾಮಗಾರಿ ನಡೆದಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ನನ್ನ ಭಾವಚಿತ್ರ ತೋರಿಸಿ ಸಾರ್ವಜನಿಕ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಮಾನಸಿಕ ದೌರ್ಜನ್ಯ ಎಸಗಿದ್ದಾರೆ. ಈ ಎಲ್ಲ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಮಾಜಿ ಮೇಯರ್ ಜೆಸಿಂತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಪ್ರಮುಖರಾದ ಅಪ್ಪಿ, ನಮಿತಾ ರಾವ್, ರಘುರಾಜ್ ಕದ್ರಿ, ಚೇತನ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News