ಚಾರ್ಮಾಡಿ ಘಾಟ್: ಒಂದು ತಿಂಗಳು ವಾಹನ ಸಂಚಾರ ನಿಷೇಧ

Update: 2019-08-14 13:38 GMT

ಮಂಗಳೂರು, ಆ.14: ಚಾರ್ಮಾಡಿ ಘಾಟ್‌ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೇಲಿಂದ ಮೇಲೆ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ರಸ್ತೆ ದುರಸ್ತಿಗೆ ತಿಂಗಳ ಕಾಲಾವಕಾಶ ಅಗತ್ಯವಿದ್ದು, ಆ.15ರಿಂದ ಸೆಪ್ಟಂಬರ್ 14ರವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ದ.ಕ. ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ರಾ.ಹೆ. 73ರ ಮಂಗಳೂರು-ವಿಲ್ಲುಪುರಂ ರಸ್ತೆಯ 76 ಕಿ.ಮೀ.ನಿಂದ 83.20 ಕಿ.ಮೀ.ವರೆಗಿನ ಚಾರ್ಮಾಡಿ ಘಾಟ್‌ನಲ್ಲಿ ಮುಂಗಾರು ಮಳೆ ರಭಸ ಪಡೆದಿದೆ. ಪರಿಣಾಮ ಆ.8ರಂದು ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಹಲವೆಡೆ ತಿರುವುಗಳಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿವೆ.

ಗುಡ್ಡ ಕುಸಿತ ಪ್ರದೇಶದ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆರವುಗೊಳಿಸಿ ದುರಸ್ತಿಗೊಳಿಸಿದರೂ ಮೇಲಿಂದ ಮೇಲೆ ಗುಡ್ಡ ಕುಸಿಯುತ್ತಿರುವ ಅವಘಡಗಳು ಸಂಭವಿಸುತ್ತಿವೆ. ಈ ನಡುವೆ ಚಾರ್ಮಾಡಿಯಲ್ಲಿ ಆಗಾಗ ಸಂಚಾರ ನಿಷೇಧಿಸಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿತ್ತು. ಘಾಟ್‌ನಲ್ಲಿ ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆಗಳು ಕುಸಿದು ಬಿದ್ದಿವೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಘಾಟ್‌ನಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಈ ಭಾಗದಲ್ಲಿ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಲು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಚಾರ್ಮಾಡಿ ಭಾಗದಲ್ಲಿ ಗುಡ್ಡ ಕುಸಿತದ ಮಣ್ಣು ತೆರವುಗೊಳಿಸಲು ಹಾಗೂ ರಸ್ತೆಯನ್ನು ದುರಸ್ತಿಗೊಳಿಸಿ ಸುಸ್ಥಿತಿಗೆ ತರಲು ಸಾರ್ವಜನಿಕ ಹಿತದೃಷ್ಟಿಯಿಂದ ಆ.15ರಿಂದ ಮಧ್ಯರಾತ್ರಿ 12ರಿಂದ ಸೆಪ್ಟಂಬರ್ 14ರ ಮಧ್ಯರಾತ್ರಿ 12ರವರೆಗೆ ವಾಹನಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಸಂಚಾರ ನಿರ್ಬಂಧ-ಬದಲಿ ಮಾರ್ಗ

ಚಾರ್ಮಾಡಿ ಘಾಟ್‌ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಬದಲಿ ಮಾರ್ಗದ ಮೂಲಕ ವಾಹನಗಳು ಸಂಚರಿಸಲು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ.

ರಾ.ಹೆ.73 ಮಂಗಳೂರು-ವಿಲ್ಲುಪುರಂ ರಸ್ತೆಯ ಚಾರ್ಮಾಡಿ ಘಾಟ್ ಭಾಗದಲ್ಲಿ 76 ಕಿ.ಮೀ. ನಿಂದ 86.20 ಕಿ.ಮೀ.ವರೆಗೆ (ದ.ಕ. ಜಿಲ್ಲಾ ಗಡಿ) ವಾಹನ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.

1. ಉಜಿರೆ- ಧರ್ಮಸ್ಥಳ- ಕೊಕ್ಕಡ- ಗುಂಡ್ಯ- ಶಿರಾಡಿ (ರಾ.ಹೆ.75) ಮುಖಾಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

2. ಮೂಡಿಗೆರೆ ಹ್ಯಾಂಡ್ ಪೋಸ್ಟ್- ಜನ್ನಾಪುರ- ಆನೆಮಹಲ್- ಶಿರಾಡಿ- ಗುಂಡ್ಯ (ರಾ.ಹೆ. 75) ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News