ಎಚ್ಚರಿಕೆ,ನಿಮ್ಮ ಒಂದು ತಪ್ಪು ಗೂಗಲ್ ಹುಡುಕಾಟ ನಿಮ್ಮ ಬ್ಯಾಂಕ್ ಖಾತೆಯನ್ನು ಗುಡಿಸಿಹಾಕಬಲ್ಲದು

Update: 2019-08-14 13:41 GMT

ನಮಗೆ ಯಾವುದೇ ನೆರವು ಅಥವಾ ಗ್ರಾಹಕ ಬೆಂಬಲ ಅಗತ್ಯವಾದಾಗಲೆಲ್ಲ ನಾವು ಬಿಜಿನೆಸ್ ಮತ್ತು ಕಸ್ಟಮರ್ ಕೇರ್ ಸಂಖ್ಯೆಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡುತ್ತೇವೆ. ಆದರೆ ಯಾರೋ ವಂಚಕ ಅಥವಾ ಹ್ಯಾಕರ್ ಅಂತರ್ಜಾಲದಲ್ಲಿ ಹರಿಬಿಟ್ಟಿರುವ ನಕಲಿ ನಂಬರ್‌ಗಳ ಜಾಲದಲ್ಲಿ ಸಿಕ್ಕಿಬೀಳುವ ಸಾಧ್ಯತೆಯಿರುವುದರಿಂದ ಈ ಅಭ್ಯಾಸ ತುಂಬ ದುಬಾರಿಯಾಗಬಹುದು. ಇಂತಹ ವಂಚಕರು ನಾವು ನಡೆಸುವ ಇಂತಹ ಹುಡುಕಾಟಗಳನ್ನೇ ಕಾಯುತ್ತಿರುತ್ತಾರೆ.

ಇತ್ತೀಚಿಗೆ ಬೆಂಗಳೂರಿನ ಮಹಿಳೆಯೊರ್ವಳು ತನ್ನ ಆರ್ಡರ್‌ನ ರಿಫಂಡ್ ಕೋರಲು ನಕಲಿ ಝೊಮ್ಯಾಟೊ ಕಾಲ್ ಸೆಂಟರ್‌ಗೆ ಕರೆ ಮಾಡಿದಾಗ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಅಷ್ಟೂ ಹಣವನ್ನು ಕಳೆದುಕೊಂಡಿದ್ದಾಳೆ. ಝೊಮ್ಯಾಟೊ ಆ್ಯಪ್‌ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕುವುದು ಕಷ್ಟವಾದಾಗ ಆಕೆ ಗೂಗಲ್‌ನಲ್ಲಿ ಹುಡುಕಾಡಿ ಸಂಖ್ಯೆಗೆ ಕರೆ ಮಾಡಿದ್ದಳು. ಈ ನಕಲಿ ಕಸ್ಟಮರ್ ಕೇರ್‌ನಲ್ಲಿ ತನ್ನ ರಿಫಂಡ್ ಮನವಿಯನ್ನು ದಾಖಲಿಸಿದ ಬಳಿಕ ಕೆಲವೇ ನಿಮಿಷಗಳಲ್ಲಿ ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಅಷ್ಟೂ ಹಣ ಮಾಯವಾಗಿತ್ತು.

ಚೆನೈನಲ್ಲಿಯೂ ಇಂತಹುದೇ ಪ್ರಕರಣವೊಂದರಲ್ಲಿ ಗ್ರಾಹಕನೋರ್ವ ಅಂತರ್ಜಾಲ ಹುಡುಕಾಟದ ಮೂಲಕ ಸಿಕ್ಕಿದ್ದ ನಕಲಿ ಕಸ್ಟಮರ್ ಕೇರ್ ಸಂಖ್ಯೆಗಳಿಗೆ ಕರೆ ಮಾಡಿ ಕೊನೆಗಳಿಗೆಯಲ್ಲಿ ಬುದ್ಧಿವಂತಿಕೆ ಮೆರೆದು ಪಂಗನಾಮ ಹಾಕಿಸಿಕೊಳ್ಳುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾನೆ. ನಕಲಿ ಕಸ್ಟಮರ್ ಕೇರ್ ರಿಫಂಡ್ ಪ್ರಕ್ರಿಯೆಗೆ ಚಾಲನೆ ನೀಡಲು ಆತನ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪಿನ್,ಪಾಸ್‌ವರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ನೀಡುವಂತೆ ಸೂಚಿಸಿತ್ತು. ಅನುಮಾನಗೊಂಡ ಆತ ತಪ್ಪು ಪಿನ್ ನೀಡಿದ್ದ. ಈ ಕರೆಯ ಬೆನ್ನಲ್ಲೇ ಬ್ಯಾಂಕಿನಿಂದ ತಪ್ಪು ಪಿನ್‌ನಿಂದಾಗಿ 5,000 ರೂ. ಮತ್ತು 10 ರೂ.ಗಳ ಎರಡು ವಹಿವಾಟುಗಳು ವಿಫಲಗೊಂಡಿವೆ ಎಂಬ ಎರಡು ಎಸ್‌ಎಂಎಸ್ ಸಂದೇಶಗಳು ಆತನ ಮೊಬೈಲ್‌ಗೆ ಬಂದಿದ್ದವು.ಈ ನಕಲಿ ಕಾಲ್ ಸೆಂಟರ್‌ಗಳಿಗೆ ಸಂಬಂಧಿಸಿದಂತೆ ಝೊಮ್ಯಾಟೊ ಪೊಲೀಸ್ ದೂರುಗಳನ್ನು ದಾಖಲಿಸಿದೆ.

ನಕಲಿ ಕಸ್ಟಮರ್ ಕೇರ್ ಸೆಂಟರ್‌ಗಳು ಗ್ರಾಹಕರಿಗೆ ನೆರವಾಗುವ ನೆಪದಲ್ಲಿ ಬ್ಯಾಂಕ್ ಖಾತೆ ಸಂಖ್ಯೆ,ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರಗಳು,ಅಷ್ಟೇ ಏಕೆ...., ಒಂದು ಬಾರಿಯ ಪಾಸವರ್ಡ್(ಒಟಿಪಿ)ನ್ನೂ ಪಡೆದುಕೊಳ್ಳುವ ಮೂಲಕ ವಂಚಿಸಿರುವ ಹಲವಾರು ಪ್ರಕರಣಗಳು ಕಳೆದ ಕೆಲವು ತಿಂಗಳುಗಳಲ್ಲಿ ವರದಿಯಾಗಿವೆ.

 ಉದ್ಯೋಗಿಗಳ ಭವಿಷ್ಯನಿಧಿ (ಪಿಎಫ್)ಯಲ್ಲಿಯೂ ಇಂತಹುದೇ ಘಟನೆ ನಡೆದಿದೆ. ವಂಚಕ ವ್ಯಕ್ತಿ ಗೂಗಲ್‌ನಲ್ಲಿ ಭವಿಷ್ಯನಿಧಿ ಸಂಸ್ಥೆಯ ಮುಂಬೈ ಕಚೇರಿಯ ಸಂಪರ್ಕ ವಿವರಗಳನ್ನು ಬದಲಿಸಿದ್ದ. ಜನರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಾಗ ವಂಚಕ ಅವರ ವೈಯಕ್ತಿಕ ವಿವರಗಳನ್ನು ಕೇಳುತ್ತಿದ್ದ ಮತ್ತು ಅವರ ಪೈಕಿ ಹಲವಾರು ಜನರನ್ನು ವಂಚಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News