ಕೇರಳ ಪ್ರವಾಹ ಸಾವಿನ ಸಂಖ್ಯೆ 95ಕ್ಕೇರಿಕೆ; 1.89 ಲ.ಕ್ಕೂ ಅಧಿಕ ಜನರ ಸ್ಥಳಾಂತರ

Update: 2019-08-14 14:33 GMT

ತಿರುವನಂತಪುರ, ಆ.14: ಪ್ರವಾಹಪೀಡಿತ ಕೇರಳದಲ್ಲಿ ಸಾವುಗಳ ಸಂಖ್ಯೆ 95ಕ್ಕೇರಿದ್ದು, 1.89 ಲಕ್ಷಕ್ಕೂ ಅಧಿಕ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಇಲ್ಲಿ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಮಂಗಳವಾರ ರಾತ್ರಿಯಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು,ಹಲವಾರು ಸ್ಥಳಗಳು ಜಲಾವೃತಗೊಂಡಿವೆ. ಹವಾಮಾನ ಇಲಾಖೆಯು ಮಲಪ್ಪುರಂ,ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಗಾಗಿ ರೆಡ್ ಅಲರ್ಟ್ ಘೋಷಿಸಿದೆ. ರಾಜ್ಯದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಬುಧವಾರ ರಾಜ್ಯದ 11 ಜಿಲ್ಲೆಗಳಲ್ಲ್ಲಿ ಶಾಲಾಕಾಲೇಜುಗಳು ಮುಚ್ಚಿದ್ದವು.

ಸರಕಾರವು ಸಂತ್ರಸ್ತರಿಗೆ ಸಾಧ್ಯವಿದ್ದಷ್ಟು ನೆರವು ಒದಗಿಸಲು ಪ್ರಯತ್ನಿಸುತ್ತಿದೆ. ಸದ್ಯಕ್ಕೆ ಸಂತ್ರಸ್ತ ಕುಟುಂಬಗಳಿಗೆ ತಲಾ 10,000 ರೂ.ಗಳನ್ನು ವಿತರಿಸಲಾಗುತ್ತಿದೆ. ತಮ್ಮ ಮನೆ ಮತ್ತು ಭೂಮಿಯನ್ನು ಕಳೆದುಕೊಂಡವರಿಗೆ 10 ಲ.ರೂ.ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪ್ರತಿಕೂಲ ಹವಾಮಾನವಿದ್ದರೂ ಸರಣಿ ಭೂಕುಸಿತಗಳಿಂದ ಇಡೀ ಗ್ರಾಮವೇ ನಾಶಗೊಂಡಿರುವ ಮಲಪ್ಪುರಂ ಜಿಲ್ಲೆಯ ಕವಳಪ್ಪರದಲ್ಲಿ ಶೋಧ ಕಾರ್ಯಾಚರಣೆಗಳು ಈಗಲೂ ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದರು.

ಅತ್ತ ವಯನಾಡಿನಲ್ಲಿ ಭೂಕುಸಿತ ಸಂಭವಿಸಿರುವ ಪುತ್ತುಮಲದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಮಣ್ಣು ಮತ್ತು ಬಂಡೆಗಲ್ಲುಗಳುರುಳಿ ಕಣಿವೆಯಲ್ಲಿನ ಇಡೀ ವಸತಿ ಪ್ರದೇಶವು ಕೊಚ್ಚಿಹೋಗಿದ್ದು,15 ಅಡಿಗಳಷ್ಟು ಮಣ್ಣು ಮತ್ತು ಕೆಸರಿನಿಂದ ಮುಚ್ಚಿಹೋಗಿದೆ ಎಂದು ವಿಶೇಷಾಧಿಕಾರಿ ಯು.ವಿ.ಜೋಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News