ಉಡುಪಿ: ಮಾಧ್ಯಮ ಮಿತ್ರರಿಂದ ನೆರೆ ಸಂತ್ರಸ್ತರಿಗೆ ನೆರವು ಹಸ್ತಾಂತರ

Update: 2019-08-14 14:33 GMT

ಉಡುಪಿ, ಆ.14: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಅವರ ನೆರವಿಗೆ ಉಡುಪಿ ಪ್ರೆಸ್ ಕ್ಲಬ್ ಮಾಧ್ಯಮ ಮಿತ್ರರ ತಂಡ ಸುಮಾರು 2 ಲಕ್ಷ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಗಿದೆ.

ವಿವಿಧ ಟಿವಿ ವಾಹಿನಿಗಳು ನೀಡಿದ ಕರೆಯಂತೆ ಉಡುಪಿ ಪ್ರೆಸ್ ಕ್ಲಬ್ನ ಸಹಕಾರದೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಂತ್ರಸ್ಥರ ಅಗತ್ಯ ಬಳಕೆಗೆ ಬೇಕಾದ ಬಟ್ಟೆ, ನೀರು, ಅಕ್ಕಿ, ದಿನೋಪಯೋಗಿ ವಸ್ತುಗಳು, ಔಷಧಿ, ಹಿಟ್ಟು, ಬೇಳೆ, ಬಿಸ್ಕತ್, ಚಾಪೆ, ಅಡುಗೆ ಎಣ್ಣೆ, ನೀರಿನ ಬಾಟೆಲ್, ಸೋಪು, ಚಹಾ ಪುಡಿ ಸೇರಿದಂತೆ 2ಲಕ್ಷ ರೂ.ಗೂ ಅಧಿಕ ಮೌಲ್ಯದ ನೆರವನ್ನು ಸಂಗ್ರಹಿಸಲಾಗಿದೆ.

ಸಂಗ್ರಹಿಸಿದ ವಸ್ತುಗಳ ಮೊದಲ ಕಂತನ್ನು ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗೆ ವಾಹನದ ಮೂಲಕ ಕಳುಹಿಸಲಾಯಿತು.

ಪ್ರೆಸ್ ಕ್ಲಬ್ಬಿನ ಸಂಚಾಲಕ ನಾಗಾರಾಜ ರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಸಹಕಾರ್ಯದರ್ಶಿ ಮೈಕಲ್ ರೊಡ್ರಿಗಸ್, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೇಚ್ಚಾರ್, ಪತ್ರಕರ್ತರಾದ ಶಶಿಧರ ಮಾಸ್ತಿಬೈಲು, ಸಂದೀಪ್ ಪೂಜಾರಿ, ಚೇತನ್ ಮಟಪಾಡಿ, ಅಶೋಕ್ ಪೂಜಾರಿ, ರಾಜೇಶ್ ಶೆಟ್ಟಿ, ಮಂಜುನಾಥ್ ಪಟಗಾರ್, ಅಂಕಿತ್ ಶೆಟ್ಟಿ, ಹರೀಶ್ ಬಲಾಯಿಪಾದೆ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಇಲಾಖೆಯ ಶಿವಕುಮಾರ್, ಸಿಬಂದಿ ಸತೀಶ್ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News