ಕಲ್ಮಾಡಿ ಚರ್ಚ್ ವಾರ್ಷಿಕ ಹಬ್ಬ: ತೇರಿನ ಮೆರವಣಿಗೆಗೆ ಚಾಲನೆ

Update: 2019-08-14 14:36 GMT

ಉಡುಪಿ, ಆ.14: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್‌ನ ವೆಲಕಂಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಬ್ಬದ ಪ್ರಯುಕ್ತ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ ಬುಧವಾರ ನಡೆಯಿತು.

ಆದಿ ಉಡುಪಿ ಜಂಕ್ಷನ್ ಬಳಿ ತೇರಿನ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಕ್ತಿ ಎಂಬುದು ಮನಸ್ಸಿನಿಂದ ಬರಬೇಕೇ ಹೊರತು ಬಲವಂತವಾಗಿ ಹೇರುವಂತದ್ದಲ್ಲ. ವೆಲಂಕಣಿ ಮಾತೆ ಪವಾಡ ಮಾತೆ ಎಂದೇ ಹೆಸರಾಗಿದ್ದು, ಪ್ರಾರ್ಥನೆಯಿಂದ ಲಭಿಸುವ ಫಲವೇ ಪವಾಡವಾಗಿದೆ ಎಂದರು.

ಬಳಿಕ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ ಆದಿಉಡುಪಿ ಜಂಕ್ಷನ್ ಬಳಿಯಿಂದ ಸಾಗಿ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನವರೆಗೆ ಪಾದಯಾತ್ರೆ ಮೂಲಕ ತೆರಳಿತು. ಮೆರವಣಿಗೆಯ ಬಳಿಕ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಪೀಟರ್ ಪೌಲ್ ಸಲ್ಡಾನ ಅವರು ಪ್ರಾರ್ಥನಾ ವಿಧಿ ಹಾಗೂ ಬಲಿಪೂಜೆಯನ್ನು ನೆರವೇರಿಸಿದರು.

ಸ್ಥಳೀಯನಗರಸಭಾ ಸದಸ್ಯ ಸುಂದರ್, ಚರ್ಚಿನ ಪ್ರಧಾನ ಧರ್ಮಗುರು ವಂ. ಆಲ್ಬನ್ ಡಿಸೋಜಾ, ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಂಚಾಲಕ ವಂ. ಪ್ರವೀಣ್ ಮೊಂತೆರೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, ಚರ್ಚಿನ 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಆ.15ರಂದು ಸಂಜೆ 4ಗಂಟೆಗೆ ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ನಡೆಯಲಿದ್ದು, ಇದರ ನೇತೃತ್ವವನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧಕ್ಷ ರಾದ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸುವರು. ಬೆಳಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯ ಬಲಿಪೂಜೆ ಬಳಿಕ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಅಪರಾಹ್ನ 2ಕ್ಕೆ ಕೊಂಕಣಿಯಲ್ಲಿ ಸಂಜೆ 6ಕ್ಕೆ ಕನ್ನಡದಲ್ಲಿ ಹಾಗೂ ರಾತ್ರಿ 8ಕ್ಕೆ ಇಂಗ್ಲಿಷ್‌ನಲ್ಲಿ ಬಲಿಪೂಜೆ ನಡೆಯಲಿದೆ ಎಂದು ಚರ್ಚ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News