ಮಂಗಳೂರು: ಸಿಸಿಬಿ ಹೆಡ್‌ಕಾನ್‌ಸ್ಟೆಬಲ್‌ಗೆ ರಾಷ್ಟ್ರಪತಿ ಪೊಲೀಸ್ ಪದಕ

Update: 2019-08-14 14:53 GMT

ಮಂಗಳೂರು, ಆ.14: ಮಂಗಳೂರಿನ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ)ನ ಹೆಡ್‌ಕಾನ್ಸ್‌ಟೆಬಲ್ ಚಂದ್ರ ಕೆ. ಅಡೂರು ಅವರು ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.

1996ರಲ್ಲಿ ಪೊಲೀಸ್ ಇಲಾಖೆಗೆ ಕಾನ್ಸ್‌ಟೆಬಲ್ ಆಗಿ ಸೇರ್ಪಡೆಗೊಂಡ ಚಂದ್ರ ಕೆ. ಅವರು ಮಂಗಳೂರಿನ ಪಾಂಡೇಶ್ವರ, ಉಳ್ಳಾಲ, ಡಿಸಿಐಬಿ ಠಾಣೆಗಳಲ್ಲಿ ಹಾಗೂ 2014ರಲ್ಲಿ ಹೆಡ್‌ಕಾನ್ಸ್‌ಟೆಬಲ್ ಆಗಿ ಭಡ್ತಿ ಹೊಂದಿದ ಬಳಿಕ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಮತ್ತು ಈಗ ಸಿಸಿಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭೂಗತ ಪಾತಕಿಗಳು ಮತ್ತು ರೌಡಿಗಳು ಸೇರಿದಂತೆ ವಿವಿಧ ಆರೋಪಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ತಿಳುವಳಿಕೆಯನ್ನು ಹೊಂದಿರುವ ಚಂದ್ರ ಕೆ. ಅವರ ಸಹಾಯದಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಅನೇಕ ಮಂದಿ ಕ್ರಿಮಿನಲ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಅವರು ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೆ ಭಾಜನರಾಗಿದ್ದಾರೆ.
ಈ ಹಿಂದೆ 2010ರಲ್ಲಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದರು. ತಮ್ಮ ಸೇವಾವಧಿಯಲ್ಲಿ 33,000 ರೂ.ಗಳಿಗಿಂತಲೂ ಅಧಿಕ ನಗದು ಬಹುಮಾನ, 10 ಪ್ರಶಂಸಾ ಪತ್ರ ಹಾಗೂ 40 ಉತ್ತಮ ಸೇವಾ ಪುರಸ್ಕಾರಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News