​ಮಂಗಳೂರು ವಲಯ ಮುಖ್ಯ ಅಗ್ನಿಶಾಮಕ ಅಧಿಕಾರಿಗೆ ರಾಷ್ಟ್ರಪತಿ ಪದಕ

Update: 2019-08-14 15:58 GMT

ಮಂಗಳೂರು, ಆ.14: ಸ್ವಾತಂತ್ರೋತ್ಸವ ಅಂಗವಾಗಿ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಂಗಳೂರು ವಲಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಟಿ.ಎನ್.ಶಿವಶಂಕರ್ ಅವರಿಗೆ 2019ನೇ ಸಾಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

1993ರಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡ ಟಿ.ಎನ್.ಶಿವಶಂಕರ್, ಬೆಂಗಳೂರಿನಲ್ಲಿ ಅಗ್ನಿಶಾಮಕ ಠಾಣಾ ಅಧಿಕಾರಿಯಾಗಿ ವೃತ್ತಿ ಆರಂಭಿಸಿದರು. ನಂತರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ ಭಡ್ತಿ ಹೊಂದಿದ ಬಳಿಕ ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದರು.

ಆನಂತರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯಾಗಿ ಭಡ್ತಿ ಹೊಂದಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರು. ಆನಂತರ ಮೂರು ವರ್ಷಗಳಿಂದ ಮಂಗಳೂರು ವಲಯ ಮುಖ್ಯ ಅಗ್ನಿಶಾಮಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿವಶಂಕರ್ ಅವರು ಅಗ್ನಿಶಾಮಕ ಇಲಾಖೆಯಲ್ಲಿ ಸಲ್ಲಿಸಿದ ಅಪಾರ ಸೇವೆಗಾಗಿ 2019ನೇ ಸಾಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಈ ಹಿಂದೆ 1996ರಲ್ಲಿ ಆಲ್ ಇಂಡಿಯಾ ವಾಟರ್‌ಮೆನ್‌ಶಿಪ್ ಕೋರ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 2005ರಲ್ಲಿ ಮುಖ್ಯಮಂತ್ರಿಯ ಕಂಚು ಪದಕ, 2010ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕ, 2014ರಲ್ಲಿ ಮುಖ್ಯಮಂತ್ರಿಯ ಶ್ಲಾಘನೀಯ ಪದಕ ಪಡೆದಿದ್ದಾರೆ. ತಮ್ಮ ಸೇವಾವಧಿಯಲ್ಲಿ 27 ನಗದು ಸಹಿತ ಪ್ರಶಸ್ತಿ ಪದಕಗಳನ್ನು ಬಾಚಿಕೊಂಡಿದ್ದಾರೆ.

2018ರಲ್ಲಿ ಕೊಡಗಿನ ಜೋಡುಪಾಲದಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿ 450ಕ್ಕೂ ಹೆಚ್ಚು ಸಂತ್ರಸ್ತರನ್ನು ರಕ್ಷಣೆ ಮಾಡಿದ್ದರು. 2011ರಲ್ಲಿ ಲಂಡನ್‌ನಲ್ಲಿ ಅರ್ಬನ್ ಸರ್ಚ್ ಆ್ಯಂಡ್ ರೆಸ್ಕೂ ಕೋರ್ಸ್‌ನಲ್ಲಿ ತರಬೇತಿ ಪಡೆದು ಬೆಂಗಳೂರಿನ ಅಗ್ನಿಶಾಮಕ ಅಕಾಡಮಿಯಲ್ಲಿ ದೇಶದ ವಿವಿಧೆಡೆಯ 200ಕ್ಕೂ ಹೆಚ್ಚು ಅಗ್ನಿಶಾಮಕ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News