ಜಮ್ಮು ಕಾಶ್ಮೀರದಲ್ಲಿ ಆದ ಬದಲಾವಣೆಯಿಂದ ಜನತೆಗೆ ಅನುಕೂಲ: ರಾಷ್ಟ್ರಪತಿ ಕೋವಿಂದ್

Update: 2019-08-15 05:32 GMT

ಹೊಸದಿಲ್ಲಿ, ಆ.14: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವುದರಿಂದ ಜನತೆಗೆ ಅನುಕೂಲವಾಗಲಿದೆ ಮತ್ತು ಹೆಣ್ಣುಮಕ್ಕಳಿಗೆ ನ್ಯಾಯ ದೊರೆಯಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಸ್ವಾತಂತ್ರ ದಿನಾಚರಣೆಯ ಮುನ್ನಾ ದಿನ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಕೋವಿಂದ್, ಜಮ್ಮು ಕಾಶ್ಮೀರ ಮತ್ತು ಲಡಾಖ್‌ಗೆ ಸಂಬಂಧಿಸಿ ಇತ್ತೀಚೆಗೆ ಆಗಿರುವ ಮಾರ್ಪಾಡಿನಿಂದ ಈ ಪ್ರದೇಶಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ. ಅಲ್ಲದೆ ದೇಶದ ಇತರೆಡೆಯ ಜನತೆ ಪಡೆಯುತ್ತಿರುವ ಹಕ್ಕು ಮತ್ತು ಸೌಲಭ್ಯಗಳನ್ನು ಈ ರಾಜ್ಯದ ಜನರೂ ಪಡೆಯುವಂತಾಗಿದೆ ಎಂದು ಹೇಳಿದರು. ಶಿಕ್ಷಣದ ಹಕ್ಕು, ಮಾಹಿತಿಯ ಹಕ್ಕು, ತ್ರಿವಳಿ ತಲಾಖ್ ಪದ್ಧತಿಯ ಅಂತ್ಯದಿಂದ ದೊರಕುವ ಸೌಲಭ್ಯಗಳನ್ನು ಈಗ ಕಾಶ್ಮೀರದ ಜನರೂ ಪಡೆಯುವಂತಾಗಿದೆ. ರಾಜ್ಯದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಲಿದೆ ಎಂದು ಕೋವಿಂದ್ ಹೇಳಿದರು.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನ ಅತ್ಯಂತ ಸುದೀರ್ಘ ಹಾಗೂ ಫಲದಾಯಕವಾಗಿತ್ತು . ರಚನಾತ್ಮಕ ಚರ್ಚೆ ಹಾಗೂ ಸರ್ವಪಕ್ಷಗಳ ಬೆಂಬಲದಿಂದ ಹಲವು ಪ್ರಮುಖ ಮಸೂದೆಗಳು ಅಂಗೀಕಾರ ಪಡೆದವು. ಮುಂದಿನ ಐದು ವರ್ಷದಲ್ಲಿ ಇಂತಹ ಇನ್ನಷ್ಟು ಅಧಿವೇಶನಗಳು ನಡೆಯಲಿವೆ ಎಂಬುದರ ಸೂಚಕ ಇದಾಗಿದೆ ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.

ಬಜೆಟ್‌ನ ಭಾಗವಾಗಿರುವ ಹಣಕಾಸು ಶಾಸನ ಸೇರಿದಂತೆ 30 ಮಸೂದೆಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದ್ದು ಕಳೆದ ಒಂದು ದಶಕದಲ್ಲೇ ಇದು ದಾಖಲೆಯಾಗಿದೆ. ಅಲ್ಲದೆ ಪ್ರಥಮ ಬಾರಿ ಸಂಸದರಾಗಿ ಆಯ್ಕೆಯಾದ 265 ಸಂಸದರಲ್ಲಿ 241 ಜನಪ್ರತಿನಿಧಿಗಳು(ಶೇ.96ರಷ್ಟು) ವಿವಿಧ ಚರ್ಚೆಯಲ್ಲಿ ಭಾಗವಹಿಸಿರುವುದೂ ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News