ಅತಿವೃಷ್ಟಿ -ಅನಾವೃಷ್ಟಿ ಸಮತೋಲನಕ್ಕೆ ‘ಚಿತ್ರಾನ್ನ ಸೇವೆ’, ಪ್ರಾರ್ಥನೆ

Update: 2019-08-14 16:22 GMT

ಉಡುಪಿ, ಆ.14: ರಾಜ್ಯದಲ್ಲಿ ಪ್ರಾಕೃತಿಕ ಸಮತೋಲನ ಹಾಗೂ ಅತಿವೃಷ್ಟಿ ಶಮನಕ್ಕೆ ಪ್ರಾರ್ಥಿಸಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಬುಧವಾರ ಸಂಜೆ ಉಡುಪಿ ರಥಬೀದಿಯಲ್ಲಿರುವ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ‘ಚಿತ್ರಾನ್ನ ಸೇವೆ’ ನಡೆಯಿತು.

ಪರ್ಯಾಯ ಫಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಗ್ರಿ ಹರಿದಾಸ ಐತಾಳ್ ಅವರು ಚಿತ್ರಾನ್ನ ಸೇವೆ ಸಂಪನ್ನಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ರಾಜ್ಯದಲ್ಲಿ ಕಳೆದ ಹಲವು ದಿನದಿಂದ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾಗೂ ಜೀವ ಹಾನಿಯಾಗಿದೆ. ಹಿಂದೆ ಅನಾವೃಷ್ಟಿಯಾದರೆ ಕಪ್ಪೆ ಮದುವೆ ಹಾಗೂ ಅತಿವೃಷ್ಟಿಯಾದರೆ ದೇವರಿಗೆ ಚಿತ್ರಾನ್ನ ಸೇವೆ ನೀಡುವುದು ಸಂಪ್ರಾದಾಯ. ಅಂತೆಯೇ ಅತಿವೃಷ್ಟಿ ಹಿನ್ನೆಲೆಯಲ್ಲಿ ಅನಂತೇಶ್ವರ ದೇವರಿಗೆ ಚಿತ್ರಾನ್ನ ಸೇವೆ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಈ ಬಾರಿ ಅನಾವೃಷ್ಟಿಯಾದ ಸಂದರ್ಭ ಜನರ ಬೇಡಿಕೆಯ ಮೇರೆಗೆ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿತ್ತು. ಅನಂತರ ಉತ್ತಮ ಮಳೆಯಾಗಿತ್ತು. ಕಳೆದ 7 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಪ್ಪೆ ದಂಪತಿಗಳಿಗೆ ಡೈವರ್ಸ್ ನೀಡುವಂತೆ ಟ್ರೋಲ್ ಸಂದೇಶಗಳು ಹರಿದಾಡುತ್ತಿವೆ. ನನ್ನ ಪ್ರಕಾರ ಪ್ರಾಣಿ ಗಳಿಗೆ ಡೈವರ್ಸ್ ಸಲ್ಲದು ಎಂದು ಸಾಮಾಜಿಕ ಜಾಲತಾಣಗಳ ಟ್ರೋಲಿಗರ ವಿರುದ್ಧ ಒಳಕಾಡು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ರಾಜೇಶ್ ಕಾಪು, ರಾಘವೇಂದ್ರ, ದಿನೇಶ್ ಕಲ್ಯಾಣಿ, ಸಂಜಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News