ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ರೆಡ್ ಅಲರ್ಟ್ ಘೋಷಣೆ

Update: 2019-08-14 16:30 GMT

ಉಡುಪಿ, ಆ.14: ಜಿಲ್ಲಾದ್ಯಂತ ನಿರಂತರ ಮಳೆಯಾಗುತ್ತಿದ್ದು, ರಾಜ್ಯದ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಆ.15ರಂದು ವಿಪರೀತ ಮಳೆ (205 ಮಿ.ಮೀ.ಗೂ ಅಧಿಕ) ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ಗಾಳಿ ಬೀಸುವ ಸಂಭವವಿರುವುದಾಗಿ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಹಾಗೂ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕೆಳಗಿನಂತೆ ತುರ್ತು ಕ್ರಮಗಳನ್ನು ಕೈಗೊಂಡಿದೆ.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗೃತೆ ವಹಿಸಬೇಕು. ಜಲಾವೃತವಾಗುವ ಪ್ರದೇಶ ಗಳಲ್ಲಿ ಇರುವ ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ತಾಯಂದಿರು, ವೃದ್ಧರು, ಚಿಕ್ಕಮಕ್ಕಳನ್ನು ಮೊದಲೇ ಸುರಕ್ಷಿತ ಪರಿಹಾರ ಕೇಂದ್ರಗಳಿಗೆ ಕರೆ ತರಬೇಕು. ಮುಂದಿನ ಮೂರು ದಿನಗಳವರೆಗೆ ಸಮುದ್ರ ಹಾಗೂ ನದಿಗಳಲ್ಲಿ ಮೀನುಗಾರಿಕೆ ಹಡಗು ಮತ್ತು ದೋಣಿಗಳು ತೆರಳದಂತೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತಮ್ಮ ಮೊಬೈಲ್/ ಕಚೇರಿ ದೂರವಾಣಿ/ ವಾಹನ ಅಗತ್ಯ ಪರಿಕ್ರಮಗಳನ್ನು ಸದಾ ಸನ್ನದ್ಧರಾಗಿರಿಸಿಕೊಂಡು ತಕ್ಷಣವೇ ಸ್ಪಂದಿಸಬೇಕು. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡೆಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ನದಿ ಮತ್ತು ಅಣೆಕಟ್ಟುಗಳ ನೀರಿನ ಮಟ್ಟದ ಬಗ್ಗೆ ಪರಿಶೀಲಿಶಿಸಬೇಕು ಹಾಗೂ ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿ ಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.

ಸಾರ್ವಜನಿಕರು ಮತ್ತು ಪ್ರವಾಸಿಗರು ನದಿ ತೀರ, ಸಮುದ್ರ ತೀರಕ್ಕೆ ಹೋಗದಂತೆ ಎಚ್ಚರ ವಹಿಸಬೇಕು. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕಿಗೆ ತುರ್ತು ಅವಶ್ಯಕವಿರುವ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಸನ್ನದ್ಧ ಸ್ಥಿತಿಯಲ್ಲಿ ರುವಂತೆ ಹಾಗೂ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ: 0820- 2574802, ಟೋಲ್‌ಫ್ರೀ ನಂ: 1077ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News