‘ಮಂದಾರ’ದಲ್ಲಿ ಮುಂದುವರಿದ ತ್ಯಾಜ್ಯ ನೆರೆ: ಮನಪಾದಿಂದ ಕೃಷಿ ಹಾನಿ ಲೆಕ್ಕಾಚಾರ ಆರಂಭ

Update: 2019-08-14 16:39 GMT

ಮಂಗಳೂರು, ಆ.14: ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡುಪು ಸಮೀಪದ ಮಂದಾರ ಪ್ರದೇಶದಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಬೃಹತ್ ಪ್ರಮಾಣದ ತ್ಯಾಜ್ಯ ಕುಸಿದು ಕೃಷಿ ಭೂಮಿಯನ್ನು ಆವರಿಸುತ್ತಿರುವ ಘಟನೆ ಮುಂದುವರಿದಿದ್ದು, ಇಂದು ಕೂಡಾ ಮತ್ತೆ ನೂರಾರು ಮರ ಗಿಡಗಳು ತ್ಯಾಜ್ಯ ರಾಶಿಯಡಿ ಹೂತುಹೋಗಿವೆ.

ಮಂದಾರದ 26 ಮನೆಗಳ ನಿರಾಶ್ರಿತರಿಗೆ ಸದ್ಯ ಕುಲಶೇಖರದ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ಫ್ಲ್ಯಾಟ್‌ನಲ್ಲಿ ಆಶ್ರಯ ನೀಡಲಾಗಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ಆಡಳಿತದಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಆರೋಗ್ಯಾಧಿಕಾರಿಗಳು ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸುವ ಜತೆಗೆ, ಕಂದಾಯ ಇಲಾಖೆ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ರೇಶನ್ ಕಿಟ್ ಒದಗಿಸಲಾಗಿದೆ. ಇದೇ ವೇಳೆ ಯೆಯ್ಯಾಡಿಯ ಪ್ರಣವ ಸೌಹಾರ್ದ ಸೊಸೈಟಿ ಹಾಗೂ ಪದವಿನಂಗಡಿ ಮಹಿಳಾ ಮಂಡಲದವರೂ ರೇಶನ್ ಕಿಟ್‌ನ ನೆರವು ನೀಡಿದ್ದಾರೆ.

ಇಂದು ಕೂಡಾ ನೂರಾರು ಫಲಭರಿತ ಅಡಿಕೆ, ತೆಂಗು ಸೇರಿದಂತೆ ಗಿಡ ಮರಗಳು ನಾಶವಾಗಿದ್ದು, ಸುಮಾರು 20 ಎಕರೆ ಪ್ರದೇಶದಲ್ಲಿ ಈವರೆಗೆ ಸುಮಾರು 12000ದಷ್ಟು ಫಲಭರಿತ ಅಡಿಕೆ ಮರಗಳು, 1500ದಷ್ಟು ಫಲಭರಿತ ತೆಂಗಿನ ಮರಗಳು, 10 ಸಾವಿರದಷ್ಟು ಕರಿಮೆಣಸು ಬಳ್ಳಿ, ಉಳಿದಂತೆ ಮಾವು, ಹಲಸು ಹಾಗೂ ಇತರ ಕೃಷಿ ಬೆಳೆಗಳು ನಾಶವಾಗಿವೆ ಎಂಬುದು ಸ್ಥಳೀಯರ ಲೆಕ್ಕಾಚಾರ.

ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಯ ಜತೆಗೆ ತ್ಯಾಜ್ಯ ರಾಶಿ ಮತ್ತೆ ತೋಟವನ್ನು ದಾಟಿ ಮುನ್ನುಗ್ಗುತ್ತಿದ್ದು, ಇಂದು ಕೂಡಾ ಒಂದು ನಾಗಬನ ಮತ್ತು ದೈವಸ್ಥಾನ ತ್ಯಾಜ್ಯ ರಾಶಿಯಲ್ಲ ಮುಚ್ಚಿ ಹೋಗಿದೆ.

ಸಮರೋಪಾದಿಯಲ್ಲಿ ಪರ್ಯಾಯ ರಸ್ತೆ ಕಾರ್ಯ

ಪಚ್ಚನಾಡಿಯಿಂದ ಮಂದಾರವನ್ನು ಸಂಪರ್ಕಿಸುವ ರಸ್ತೆಗಳು ತ್ಯಾಜ್ಯ ರಾಶಿಯಲ್ಲಿ ಮುಚ್ಚಿ ಹೋಗಿರುವುದರಿಂದ. ಮಾತ್ರವಲ್ಲದೆ, ತ್ಯಾಜ್ಯ ರಾಶಿ ಭಾರೀ ಸದ್ದಿನೊಂದಿಗೆ ಮರ ಗಿಡಗಳನ್ನು ಅಡಿಗೆ ಹಾಕುತ್ತಾ ಮುನ್ನುಗ್ಗುತ್ತಿರುವುದರಿಂದ ಇರುವ ಓಣಿಯಂತಹ ಕಾಲು ದಾರಿಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ಈ ನಡುವೆ ಮನಪಾದಿಂದ ಈಗಾಗಲೇ ಕುಡುಪು ಬಳಿಯಿಂದ ಮಂದಾರ ನಗರಕ್ಕೆ ಅರ್ಧದಷ್ಟು ಭಾಗಕ್ಕೆ ಇದ್ದ ಸಂಪರ್ಕ ರಸ್ತೆಯನ್ನು ಸುಗಮಗೊಳಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಈಗಾಗಲೇ ಸ್ಥಳಾಂತರಿಸಲಾಗಿರುವ ಅಲ್ಲಿನ ಮನೆಗಳ ಸಾಮಾನುಗಳನ್ನು ಸಾಗಿಸಲು ಈ ರಸ್ತೆಯನ್ನು ಬಳಸುವ ನಿಟ್ಟಿನಲ್ಲಿ ಮನಪಾ ಆಯುಕ್ತರು ಸೇರಿದಂತೆ ಅಧಿಕಾರಿಗಳು ಹಾಗೂ ಗ್ರಾಮ ಕರಣಿಕರು ಸ್ಥಳೀಯ ಖಾಸಗಿಯವರ ಮನವೊಲಿಸಿ ರಸ್ತೆ ಅಗಲಗೊಳಿಸುವ ಕಾರ್ಯವನ್ನು ಕ್ಷಿಪ್ರಗೊಳಿಸಿದ್ದಾರೆ.

ಕಲುಷಿತ ತ್ಯಾಜ್ಯ ನೆರೆಯಿಂದ ಸಾಂಕ್ರಾಮಿಕ ರೋಗ ಭೀತಿ

ತ್ಯಾಜ್ಯದ ಕಲುಷಿತ ನೀರು ಮಳೆ ನೀರಿನೊಂದಿಗೆ ಬೆರೆತು ಮಂದಾರ ಪ್ರದೇಶವೇ ಕೊಳಚೆಮಯವಾಗಿದ್ದು, ಇಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯೂ ಕಾಡುತ್ತಿದೆ. ವಿಪರೀತ ದುರ್ನಾತದ ಜತೆಗೆ, ಮುನ್ನುಗ್ಗುತ್ತಿರುವ ತ್ಯಾಜ್ಯ ರಾಶಿ ಇನ್ನೂ ಮುಂದುವರಿದಲ್ಲಿ ಕುಡುಪು ರಸ್ತೆ ಬಳಿ ಹರಿಯುವ ಹೊಳೆ ನೀರನ್ನು ಸಂಪರ್ಕಿಸಲಿದೆ. ಈ ಹೊಳೆ ನೀರು ಮರವೂರು ಅಣೆಕಟ್ಟಿಗೆ ಸೇರುತ್ತದೆ. ಇದು ಪಚ್ಚನಾಡಿ ರೈಲ್ವೇ ಸೇತುವೆಯ ಸಣ್ಣ ಹೊಳೆಗೂ ಸಂಪರ್ಕವನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಮಂದಾರ ಮಾತ್ರವಲ್ಲದೆ, ಆಸುಪಾಸಿನ ಪ್ರದೇಶಗಳಲ್ಲೂ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.

ಸಂಸದರು- ಶಾಸಕರ ಭೇಟಿ: ಶಾಶ್ವತ ಪರಿಹಾರದ ಭರವಸೆ

ಮಂಗಳೂರಿನ ಹೊರವಲಯದ ಪಚ್ಚನಾಡಿಯಲ್ಲಿರುವ ಡಂಪಿಂಗ್ ಯಾರ್ಡ್ ನಿಂದ ತ್ಯಾಜ್ಯದ ರಾಶಿ ಹರಿದು ಸನಿಹದ ಮಂದಾರ ಜನವಸತಿ ಇರುವ ಪ್ರದೇಶದ ಜನ ಅನುಭವಿಸುತ್ತಿರುವ ತೊಂದರೆಯನ್ನು ಪರಿಶೀಲಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮತ್ತು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದರು.

ಈ ಬಗ್ಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ತಜ್ಞರ ತಂಡವನ್ನು ಶೀಘ್ರದಲ್ಲಿ ಇಲ್ಲಿ ಕಳುಹಿಸಿಕೊಡಲಿದ್ದು, ತಜ್ಞರು ನೀಡುವ ವರದಿಯ ಆಧಾರದ ಮೇಲೆ ಶಾಶ್ವತ ಪರಿಹಾರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಲ್ಲಿ ಸೇರಿದ ನೀರು ಹರಿದು ಹೋಗಿ ಆಸುಪಾಸಿನ ಬಾವಿಗಳನ್ನು ಸೇರುತ್ತಿವೆ. ಕುಡಿಯುವ ನೀರಿನ ಯೋಜನೆಗಳು ಹಾಳಾಗುತ್ತಿವೆ. ಅವೈಜ್ಞಾನಿಕವಾಗಿ ಈ ಡಂಪಿಂಗ್ ಯಾರ್ಡ್ ಗೆ ಕಳೆದ ಆರೇಳು ವರ್ಷಗಳಿಂದ ಪಾಲಿಕೆಯಲ್ಲಿ ಆಡಳಿತ ಮಾಡುತ್ತಿದ್ದ ಸರಕಾರ, ಹಿಂದಿನ ರಾಜ್ಯ ಸರಕಾರ, ಆಗಿನ ಉಸ್ತುವಾರಿ ಸಚಿವರುಗಳು, ಆಗಿನ ಮೇಯರುಗಳೇ ನೇರ ಕಾರಣ. ಮಾನವ ನಿರ್ಮಿತ ಅವ್ಯವಸ್ಥೆಯಿಂದಲೇ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಬಿಜೆಪಿ ಮುಖಂಡರಾದ ದಿವಾಕರ್, ವಸಂತ ಜೆ ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ಪ್ರಶಾಂತ್ ಪೈ, ಅಜಯ್ ಕುಲಶೇಖರ್, ರವೀಂದ್ರ ನಾಯಕ್, ಸಂದೀಪ್ ಪಚ್ಚನಾಡಿ, ರಾಮ್ ಅಮೀನ್ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News