ಐಜಿಬಿಸಿ ಮಂಗಳೂರು ಘಟಕಕ್ಕೆ ಚಾಲನೆ

Update: 2019-08-14 17:10 GMT

ಮಂಗಳೂರು, ಆ.14: ಪರಿಸರ ಸ್ನೇಹಿ ಮೂಲಕ ಹಸಿರು ನಗರ ನಿರ್ಮಾಣ ನಮ್ಮ ಗುರಿಯಾಗಿದೆ ಎಂದು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ (ಐಜಿಬಿಸಿ) ಅಧ್ಯಕ್ಷ ವಿ. ಸುರೇಶ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ವತಿಯಿಂದ ಆಯೋಜಿಸಿದ ಮಂಗಳೂರು ಶಾಖೆ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ದೇಶದ ಜನಸಂಖ್ಯೆ ಏರುತ್ತಿರುವ ದಿನಗಳಲ್ಲಿ ಸೀಮಿತವಾದ ಸಂಪನ್ಮೂಲಗಳ ಮಿತಬಳಕೆ ಉಳಿತಾಯಕ್ಕೆ ಗಮನಹರಿಸಬೇಕಾದ ಅನಿವಾರ್ಯತೆ ನಮಗಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೆಹಿ ನಿರ್ಮಾಣ ಯೋಜನೆ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ವಿದ್ಯುತ್, ನೀರು, ಇತರ ಇಂಧನ ಶಕ್ತಿ ಉಳಿತಾಯವಾಗುತ್ತದೆ. ಮರು ಬಳಕೆಗೆ ಒತ್ತು ನೀಡಲಾಗುತ್ತದೆ. ದೇಶದಲ್ಲಿ ಸ್ಮಾರ್ಟ್  ಸಿಟಿ ಯೋಜನೆಯ ಸಂದರ್ಭ ಗ್ರೀನ್ ಸಿಟಿ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸ ಬೇಕಾಗಿದೆ ಹಾಗೂ ಅಂತಹ ಯೋಜನೆಯನ್ನು ಅನುಷ್ಠಾನ ಮಾಡುವವರಿಗೆ ವಿನಾಯಿತಿ ನೀಡುವ ಯೋಜನೆಯನ್ನು ಸರಕಾರ ಹೆಚ್ಚು ಜಾರಿಗೆ ತರಬೇಕಾಗಿದೆ ಎಂದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಂಗಳೂರು ನಗರವನ್ನು ಹಸಿರು ನಗರವನ್ನಾಗಿ ಮಾಡಲು 10 ಸಾವಿರ ಗಿಡ ನೆಡುವ ಮೂಲಕ ಆರಂಭಿಸಲಾಗಿದೆ. ಜೊತೆಗೆ ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣ ಇತರ ಯೋಜನೆಗಳು ಮಂಗಳೂರಿನ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.

ಮಂಗಳೂರು ನಗರದಲ್ಲಿ ತಾಜ್ಯ ನಿರ್ವಹಣೆಯೆ ಗಂಭೀರ ಸಮಸ್ಯೆಯನ್ನು ಸೃಷ್ಟಿಸಿದೆ. ಸ್ಮಾರ್ಟ್ ಸಿಟಿ ಜೊತೆ ಸ್ಮಾರ್ಟ್ ಡಂಪಿಂಗ್ ಯಾರ್ಡ್ ನಿರ್ಮಾಣವಾಗಿದೆ ಈ ಬಗ್ಗೆ ಮಾಹಿತಿ ಹೊಂದಿರುವ ಘಟಕ ಆರಂಭವಾಗಿರುವುದು ಇನ್ನಷ್ಟು ಸಹಕಾರಿಯಾಗಿದೆ ಎಂದರು.

ಈ ಸಂದರ್ಭ ಬೆಂಗಳೂರು ಐಜಿಬಿಸಿ ಹಾಗೂ ಬ್ಯಾರೀಸ್ ಗ್ರೂಪ್‌ಗಳ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಸಮಾರಂಭವನ್ನು ದ್ದೇಶಿಸಿ ಮಾತನಾಡಿ, ಇಂಡಿಯನ್ ಇಂಡಸ್ಟ್ರಿ ಕಾನ್ಫೆಡರೇಶನ್ ದೇಶದಲ್ಲಿ 157ವರ್ಷಗಳ ಹಿಂದೆ ಆರಂಭಗೊಂಡಿದೆ. ಇದರಿಂದ ದೇಶದಲ್ಲಿ ಸುಮಾರು 7 ದಶಲಕ್ಷ ಚದರ ಅಡಿ ಪರಿಸರ ಸ್ನೇಹಿ ನಿರ್ಮಾಣವಾಗಿದೆ. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಸಿಐಐಯಲ್ಲಿ ಸಂಯೋಜನೆಗೊಂಡಿರುವ ಅಂಗ ಸಂಸ್ಥೆಯಾಗಿದೆ. ಗ್ರೀನ್ ಬಿಲ್ಡಿಂಗ್ ಪರಿಸರ ಸ್ನೇಹಿ ಹಾಗೂ ಜನಸ್ನೇಹಿ ನಿರ್ಮಾಣ ವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಗ್ರೀನ್ ಬಿಲ್ಡಿಂಗ್ ಮಾರ್ಗದರ್ಶನವನ್ನು ಅನುಸರಿಸಲು ಇಂಡಿಯನ್ ಇಂಡಸ್ಟ್ರಿ ಕಾನ್ಫೆಡರೇಶನ್ ಸಲಹೆ ನೀಡಿದೆ. ರಾಜಸ್ಥಾನ ಸರಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಮ್ಮತಿಸಿದೆ. ಅದೇ ರೀತಿ ಚಂಡಿಗಡ, ಪುಣೆ ಮೊದಲಾದ ಕಡೆ ಗ್ರೀನ್ ಬಿಲ್ಡಿಂಗ್ ವಿಸ್ತರಿಸುತ್ತಿದೆ. ನಮ್ಮ ದುರಾಸೆಯಿಂದ ಪ್ರಕೃತಿಗೆ ಸಾಕಷ್ಟು ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಗ್ರೀನ್ ಬಿಲ್ಡಿಂಗ್ ಪರಿಸರ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹತ್ವದಾಗಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.

ಐಜಿಬಿಸಿಯ ಮಂಗಳೂರು ಘಟಕದ ಅಧ್ಯಕ್ಷ ಎಂ.ಡಿ. ಮೆಹ್ತಾ ಮಾತನಾಡಿ, ಮಂಗಳೂರು ನಗರದಲ್ಲಿ ಪರಿಸರ ಸ್ನೇಹಿ ನಿರ್ಮಾಣದ ಜೊತೆಗೆ ಅದನ್ನು ಮುಂದುವರಿಸುವ ಸುಸ್ಥಿರ ಅಭಿವೃದ್ಧಿ ಯೋಜನೆಗೆ ಒತ್ತು ನೀಡಬೇಕಾಗಿದೆ ಎಂದರು.

ಸಮಾರಂಭದಲ್ಲಿ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ವಿಶ್ವವಿದ್ಯಾನಿಲಯ ದ ಕುಲಸಚಿವ ಎ.ಎಂ.ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಇಂಡಿಯನ್ ಗ್ರೀನ್ ಬಿಲ್ಡಿಂಗ್‌ನ ಪ್ರಧಾನ ಸಲಹೆಗಾರ ಎಂ. ಆನಂದ ಕಾರ್ಯಕ್ರಮ ನಿರೂಪಿಸಿ, ಐಜಿಬಿಸಿಯ ಕಾರ್ಯವ್ಯಾಪ್ತಿ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News