ಆಲಡ್ಕ ಮಸೀದಿ ಅಧ್ಯಕ್ಷ ಅಬೂಬಕರ್ ಬಾವಾಜಿ ನಿಧನ

Update: 2019-08-14 17:05 GMT

ಬಂಟ್ವಾಳ, ಆ. 14: ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಶಕಕ್ಕೂ ಅಧಿಕ ಕಾಲ ದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬಿ. ಅಬೂಬಕರ್ ಬಾವಾಜಿ (55) ಅವರು ಬುಧವಾರ ಹೃದಯಾಘಾತದಿಂದ ಬಂಗ್ಲೆಗುಡ್ಡೆ ನಿವಾಸದಲ್ಲಿ ನಿಧನರಾದರು.

ಬಂಟ್ವಾಳ ತಾಲೂಕಿನಲ್ಲಿ ಮೊದಲ ಬಾರಿಗೆ ತ್ರೀಮೆನ್ಸ್ ಸರ್ವಿಸಸ್ ಎಂಬ ಶಾಮಿಯಾನ ಉದ್ಯಮ ಸ್ಥಾಪಿಸಿದ್ದ ಇವರು, ಜನಾನುರಾಗಿಯಾಗಿದ್ದರು. ಇತ್ತೀಚೆಗಷ್ಟೆ ಶಾಮಿಯಾನ ಅಸೋಸಿಯೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದೀರ್ಘ ಶಾಮಿಯಾನ ಉದ್ಯಮ ನಡೆಸಿದ್ದಕ್ಕಾಗಿ ಸನ್ಮಾನಿತಗೊಂಡಿದ್ದರು. 2005ರಲ್ಲಿ ಮೊದಲ ಬಾರಿಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಇವರು, ಬಳಿಕದ ವರ್ಷಗಳಲ್ಲಿ ನಿರಂತರವಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಪುತ್ರಿ, ಮೂರು ಮಂದಿ ಸಹೋದರರು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. 
ಮಾಜಿ ಸಚಿವ ಬಿ ರಮಾನಾಥ ರೈ, ಪುರಸಭಾ ಸದಸ್ಯ ಮುನೀಶ್ ಅಲಿ ಸಹಿತ ವಿವಿಧ ಗಣ್ಯರು ಮೃತರ ಅಂತಿಮ ದರ್ಶನ ನಡೆಸಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News