ಮಾಸ್ತಿಕಟ್ಟೆ: ಮುಂದುವರಿದ ಮಳೆಗೆ ಮತ್ತೆರಡು ಮನೆ ಕುಸಿತ, ದೈವಸ್ಥಾನ ಜಲಾವೃತ್ತ

Update: 2019-08-14 17:32 GMT

ಉಳ್ಳಾಲ: ಮಂಗಳವಾರದಿಮದ ಮತ್ತೆ ಮಳೆ ಮುಂದುವರಿದ ಪರಿಣಾಮ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯಲ್ಲಿ ನೀರು ತುಂಬಿದ್ದು, ಭಾಸ್ಕರ ಭಟ್ ಎಂಬವರ ಮನೆ ಮತ್ತು ಸಮೀಪದಲ್ಲಿರುವ ದೈವಸ್ಥಾನ ಕೃತಕ ನೆರೆಯಿಂದ ಜಲಾವೃತಗೊಂಡಿದ್ದು, ಮನೆಗೆ ನೀರು ನುಗ್ಗಿದೆ.

ಉಳ್ಳಾಲ ನಗರ ಸಭೆ ವತಿಯಿಂದ ತುಂಬಿದ ನೀರು ತೆರವು ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾಸ್ಕರ ಭಟ್ ಕುಟುಂಬಸ್ಥರು ಸಮೀಪದದಲ್ಲಿರುವ ಅವರ ತಮ್ಮ ವಿಶ್ವನಾಥ್ ಭಟ್ ಎಂಬವರ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ಸೇವಂತಿಗುಡೆಯಲ್ಲಿ ಮೂರು ಕಡೆ ತಡೆಗೋಡೆ ಜರಿದು ಬಿದ್ದು ಹಾನಿಯಾಗಿದೆ. ಈಗಾಗಲೇ ಜಲಾವೃತ್ತಗೊಂಡು ಹಾನಿಯಾದ ಮನೆಗೆ ಪರಿಹಾರ ಕಾರ್ಯ ಒದಗಿಸುವ ವ್ಯವಸ್ಥೆ ನಗರಸಭೆಯಿಂದ ಮುಂದುವರಿದಿದ್ದು, ಈ ನಡುವೆ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮನೆ ಕುಸಿತ, ಜಲಾವೃತ್ತ ಕೆಲವು ಕಡೆ ಆಗಿವೆ.

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಎರಡು ಮನೆಗಳು ಬಾಗಶಃ ಕುಸಿದುಬಿದ್ದಿದ್ದು, ಇಲ್ಲಿಗೆ ಒಟ್ಟು ಆರು ಮನೆಗಳು ಕುಸಿದು ಬಿದ್ದಂತಾಗಿದೆ. ನಿನ್ನೆ ಸುರಿದ ಮಳೆಗೆ ಅಜ್ಜಿನಡ್ಕ ನಿವಾಸಿ ಅಲಿಮಮ್ಮ ಮತ್ತು ಜಲಾಲ್‍ಬಾಗ್ ನಿವಾಸಿ ನೆಬಿಸ ಎಂಬವರ ಮನೆ ಬಾಗಶಃ ಕುಸಿದು ಬಿದ್ದಿದ್ದು, ಸುಮಾರು 80 ಸಾವಿರ ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಪ.ಪಂ. ಮುಖ್ಯಾಧಿಕಾರಿ ಪೂರ್ಣಕಲಾ ಅವರು ನಷ್ಟ ಪರಿಹಾರದ ಬಗ್ಗೆ ಪಟ್ಟಿ ತಯಾರಿಸಿ ತಹಶೀಲ್ದಾರ್‍ಗೆ ರವಾನಿಸಿದ್ದಾರೆ.

ಅಜ್ಜಿನಡ್ಕ ರಸ್ತೆ ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡಚಣೆ ಕೂಡಾ ಆಗಿದ್ದು, ಬಳಿಕ ರಸ್ತೆಯ ನೀರು ಬೇರೆ ಕಡೆ ಹರಿಯ ಬಿಟ್ಟು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News