ಅರ್ಕಾಣ: ರಸ್ತೆಗೆ ಗುಡ್ಡದ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿ

Update: 2019-08-14 17:34 GMT

ಕೊಣಾಜೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಜೀರು ಕಂಬ್ಲಪದವಿನ ಇನ್‍ಫೋಸಿಸ್ ಮುಂಭಾಗದಿಂದ ಅರ್ಕಾಣ ಮಾರ್ಗವಾಗಿ ಮಿತ್ತಕೋಡಿ ಸಂಪರ್ಕಿಸುವ ರಸ್ತೆಯ ಅರ್ಕಾಣ ಎಂಬಲ್ಲಿ ಗುಡ್ಡದ ಮಣ್ಣು ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಗುಡ್ಡದ ಮಣ್ಣು ಕುಸಿದ ಪರಿಣಾಮವಾಗಿ ಈ ರಸ್ತೆಯಲ್ಲಿ ದ್ಚಿಚಕ್ರ ವಾಹನಕ್ಕೆ ಮಾತ್ರ ಅವಕಾಶ ನೀಡಿ ಉಳಿದ ವಾಹನ ಸಂಚಾರ ವನ್ನು ಸ್ಥಗಿತಗೊಳಿಸಿ, ಪರ್ಯಾಯವಾಗಿ ಮುಡಿಪು ಕಾಯೆರ್‍ಗೋಳಿಯಾಗಿ ಮಿತ್ತಕೋಡಿ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊಣಾಜೆಯ ಮೂಲಕ ಮೆಲ್ಕಾರ್‍ಗೆ ಸಂಪರ್ಕಿಸಲು ಮುಡಿಪು ಕಾಯೆರ್‍ಗೋಳಿಯಾಗಿಯೇ ಸಂಚರಿಸಬೇಕಿತ್ತು. ಆದರೆ ನಾಲ್ಕೈದು ವರ್ಷಗಳ ಹಿಂದೆ ಕಂಬ್ಲಪದವು ಇನ್ ಪೋಸಿಸ್ ಎದುರಗಡೆಯಿಂದಾಗಿ ಅರ್ಕಾಣದ ಮೂಲಕ ಮಿತ್ತಕೋಡಿಗೆ ಸಂಪರ್ಕಿಸು ನೂತನ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಬಿ.ಸಿ.ರೋಡ್, ಮೆಲ್ಕಾರ್‍ಗೆ ತೆರಳುವವರು ಈ ರಸ್ತೆಯನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಇದೀಗ ಗುಡ್ಡದ ಮಣ್ಣು ಕುಸಿದ ಪರಿಣಾಮ  ಹಿಂದೆ ಬಳಸುತ್ತಿದ್ದ ಕಾಯೆರ್‍ಗೋಳಿ ರಸ್ತೆಯನ್ನೇ ಬಳಸಬೇಕಾಗಿದೆ.

ಪ್ರತೀ ವರ್ಷ ಕುಸಿತ: ಅರ್ಕಾಣ ರಸ್ತೆಯ ಬದಿಯಲ್ಲಿ ಎತ್ತರವಾದ ಗುಡ್ಡ ಪ್ರದೇಶವಿದ್ದು, ಇಲ್ಲಿ ರಸ್ತೆ ನಿರ್ಮಾಣದ ವೇಳೆ ಗುಡ್ಡ ಪ್ರದೇಶದ ಬದಿಗೆ ಯಾವುದೇ ತಡೆಗೋಡೆ ನಿರ್ಮಿಸದ ಕಾರಣ ಪ್ರತೀ ವರ್ಷ ಗುಡ್ಡ ಕುಸಿದು ಹಾನಿಯಾಗುತ್ತಿದೆ. ಅಲ್ಲದೆ ಇಲ್ಲಿ ನಿರ್ಮಾಣಗೊಂಡಿರುವ ರಸ್ತೆಯು ಕೂಡಾ ಅಪಾಯಕಾರಿಯಾಗಿದೆ. ಅರ್ಕಾಣ ತಗ್ಗು ಪ್ರದೇಶದ ತಿರುವು ಪ್ರದೇಶದಲ್ಲಿ ಅವೈಜ್ಞಾನಿಕ ವಾಗಿ ರಸ್ತೆ ನಿರ್ಮಾಣಗೊಂಡಿರುವುದರಿಂದಾಗಿ ಹಲವಾರು ವಾಹನ ಅಪಘಾತಗಳೂ ಇಲ್ಲಿ ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News