ಜಮ್ಮು-ಕಾಶ್ಮೀರ: ನಿರ್ಬಂಧಗಳನ್ನು ತಕ್ಷಣ ಹಿಂದೆಗೆದುಕೊಳ್ಳಲು ಪ್ರಧಾನಿ ಮೋದಿಗೆ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಆಗ್ರಹ

Update: 2019-08-15 14:18 GMT

ಹೊಸದಿಲ್ಲಿ, ಆ.15: ಜಮ್ಮು-ಕಾಶ್ಮೀರದಲ್ಲಿ ಸಂವಹನ ಮಾಧ್ಯಮಗಳ ಮೇಲಿನ ನಿರ್ಬಂಧಗಳನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಮತ್ತು ರಾಜ್ಯದ ಜನತೆಯೊಂದಿಗೆ ಮಾತುಕತೆ ನಡೆಸುವಂತೆ ಸರಕಾರೇತರ ಸಂಸ್ಥೆಯಾಗಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

ಭಾರತವು 73ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿರುವಾಗ ಕಳೆದ 10 ದಿನಗಳಿಂದಲೂ ಜಮ್ಮು-ಕಾಶ್ಮೀರದ ಜನತೆಯ ಮೇಲಿನ ನಿರ್ಬಂಧ ಮುಂದುವರಿದಿರುವುದು ವಿರೋಧಾಭಾಸವಾಗಿದೆ ಎಂದಿರುವ ಆ್ಯಮ್ನೆಸ್ಟಿ,ಸಂವಹನ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಜನತೆಯೊಂದಿಗೆ ಮಾತುಕತೆಯಲ್ಲಿ ತೊಡಗಿಕೊಳ್ಳುವಂತೆ ಮೋದಿ ಅವರಿಗೆ ಕರೆ ನೀಡಿದೆ.

 ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರಕ್ಕೆ ಭಾರತೀಯರ ಬೆಂಬಲವಿದೆ ಎಂದು ಮೋದಿಯವರು ನಂಬಿದ್ದರೆ ಅವರು ತಕ್ಷಣವೇ ಸಂವಹನ ನಿರ್ಬಂಧಗಳನ್ನು ರದ್ದುಗೊಳಿಸಬೇಕು. ಈ ನಿರ್ಧಾರವು ರಾಜ್ಯದ ಜನರ ಬದುಕಿಗೆ ಸಂಬಂಧಿಸಿರುವುದರಿಂದ ಮೋದಿ ಅವರೊಂದಿಗೆ ಮಾತುಕತೆ ನಡೆಸಬೇಕು ಮತ್ತು ಅವರು ಏನು ಹೇಳುತ್ತಾರೆ ಎನ್ನುವುದನ್ನು ಆಲಿಸಬೇಕು ಎಂದು ಹೇಳಿದ ಆಮ್ನೆಸ್ಟಿಯ ಭಾರತದ ಮುಖ್ಯಸ್ಥ ಆಕಾರ್ ಪಟೇಲ್ ಅವರು, ಜಮ್ಮು-ಕಾಶ್ಮೀರದಲ್ಲಿ ವಿಧಿಸಲಾಗಿರುವ ಯಾವುದೇ ನಿರ್ಬಂಧದ ಅವಧಿ ಸೀಮಿತವಾಗಿರಬೇಕು ಮತ್ತು ಅಂತರರಾಷ್ಟ್ರೀಯ ಕಾನೂನಿನಡಿ ಹೇಳಿರುವಂತೆ ಕಾನೂನುಬದ್ಧ ಉದ್ದೇಶಕ್ಕಾಗಿರಬೇಕು ಎಂದರು.

 ರಾಜ್ಯದಲ್ಲಿಯ ಪ್ರತಿಪಕ್ಷ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ಧ್ವನಿಯನ್ನಡಗಿಸಲಾಗಿದೆ ಎಂದು ಬೆಟ್ಟು ಮಾಡಿರುವ ಆ್ಯಮ್ನೆಸ್ಟಿ,ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ,ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರು ಎಲ್ಲಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜಮ್ಮು-ಕಾಶ್ಮೀರದಲ್ಲಿ ನಾಗರಿಕ ಸ್ವಾತಂತ್ರವನ್ನು ಸಂಪೂರ್ಣವಾಗಿ ಪ್ರತಿಬಂಧಿಸಿರುವ ಈ ಕ್ರಮವು ಕೇವಲ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ,ಜನರನ್ನು ಪ್ರತ್ಯೇಕಿಸುತ್ತದೆ ಮತ್ತು ಮಾನವ ಹಕ್ಕು ಉಲ್ಲಂಘನೆಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಭಾರತ ಸರಕಾರವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News