ಅಮಾನತುಗೊಂಡಿರುವ ತ್ರಿಪುರಾ ವಿವಿ ಉಪನ್ಯಾಸಕನಿಂದ ಪತ್ರಕರ್ತರಿಗೆ ಹಲ್ಲೆ

Update: 2019-08-15 16:02 GMT

ಅಗರ್ತಲಾ, ಆ.15: ತನ್ನ ವಿರುದ್ಧ ಮಾಧ್ಯಮಗಳಲ್ಲಿ ಪ್ರತಿಕೂಲ ವರದಿಯ ಬಳಿಕ ಸೇವೆಯಿಂದ ಅಮಾನತು ಗೊಂಡಿರುವ ತ್ರಿಪುರಾ ಕೇಂದ್ರೀಯ ವಿವಿಯ ಉಪನ್ಯಾಸಕ ಮತ್ತು ಇತರ ಹಲವರು ಸೇರಿ ಇಲ್ಲಿಯ ತ್ರಿಪುರಾ ಟೈಮ್ಸ್ ಪತ್ರಿಕೆಯ ಕಚೇರಿಗೆ ನುಗ್ಗಿ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿ,ಕಚೇರಿಯಲ್ಲಿ ದಾಂಧಲೆಗೈದು ನಷ್ಟವನ್ನುಂಟು ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಈ ಬಗ್ಗೆ ಪೊಲೀಸ್ ದೂರು ಸಲ್ಲಿಸಿರುವ ಪತ್ರಿಕೆಯ ಉದ್ಯೋಗಿಗಳು ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಮಾಜಶಾಸ್ತ್ರ ಉಪನ್ಯಾಸಕ ಮೋತಿ ಕಪೂರ್,ಸಮರ್ ಚಕ್ರವರ್ತಿ ಮತ್ತು ಇತರರನ್ನು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಲಾಗಿದೆ. ತ್ರಿಪುರಾ ಟೈಮ್ಸ್ ಕಚೇರಿಯ ಮ್ಯಾನೇಜರ್ ಸೋಮೆನ್ ಭಟ್ಟಾಚಾರ್ಜಿ ಮತ್ತು ಹಿರಿಯ ವರದಿಗಾರ ಜಯದೀಪ ಚಕ್ರವರ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗುಂಪು ಪತ್ರಿಕೆಯ ಕಚೇರಿ ಕಟ್ಟಡದಲ್ಲಿಯೇ ಇರುವ ತ್ರಿಪುರಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅರಿಂದಮ್ ಲೋಧ್ ಅವರ ನಿವಾಸಕ್ಕೂ ನುಗ್ಗಲು ಯತ್ನಿಸಿತ್ತು. ಆ ಸಂದರ್ಭದಲ್ಲಿ ನಿವಾಸಕ್ಕೆ ಬೀಗ ಹಾಕಲಾಗಿದ್ದು,ಲೋಧ ತ್ರಿಪುರಾ ಟೈಮ್ಸ್‌ನ ಮಾಜಿ ಸಂಪಾದಕರಾಗಿದ್ದಾರೆ.

ಕಪೂರ್ ತರಗತಿಯಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿದ ವೀಡಿಯೋ ವೈರಲ್ ಆಗಿದ್ದು,ಈ ಬಗ್ಗೆ ಪತ್ರಿಕೆಯು ನಾಲ್ಕು ದಿನಗಳ ಹಿಂದೆ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News