ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ಮೇರಿಕೋಮ್: ಕ್ರೀಡಾ ಸಚಿವಾಲಯದ ಅಧಿಕಾರಿಗಳಿಗೇ ಅಚ್ಚರಿ

Update: 2019-08-16 06:09 GMT

 ಹೊಸದಿಲ್ಲಿ, ಆ.16: ಈ ವರ್ಷದ ರಾಜೀವ್‌ಗಾಂಧಿ ಖೇಲ್‌ರತ್ನ ಹಾಗೂ ಅರ್ಜುನ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸಂಯೋಜನೆಯು ಕ್ರೀಡಾ ಸಚಿವಾಲಯವೇ ಹುಬ್ಬೇರಿಸುವಂತೆ ಮಾಡಿದೆ. ಸಕ್ರಿಯ ಅಥ್ಲೀಟ್ ಆಗಿರುವ ಎಂಸಿ ಮೇರಿಕೋಮ್‌ರನ್ನು ಆಯ್ಕೆ ಸಮಿತಿಯ ಓರ್ವ ಸದಸ್ಯೆಯಾಗಿ ನೇಮಕಗೊಳಿಸಿರುವುದನ್ನು ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

 ಖೇಲ್‌ರತ್ನ, ಅರ್ಜುನ ಪ್ರಶಸ್ತಿಗಳು, ಧ್ಯಾನ್‌ಚಂದ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಅಥ್ಲೀಟ್‌ಗಳನ್ನು ಆಯ್ಕೆ ಮಾಡಲು ಕ್ರೀಡಾ ಸಚಿವಾಲಯ ಈ ತಿಂಗಳಾರಂಭದಲ್ಲಿ 12 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿತ್ತು. ಸಮಿತಿಯಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್, ಮಾಜಿ ಫುಟ್ಬಾಲ್ ನಾಯಕ ಭೈಚುಂಗ್ ಭುಟಿಯಾ, ಮಹಿಳಾ ಕ್ರಿಕೆಟರ್ ಹಾಗೂ ಖ್ಯಾತ ವೀಕ್ಷಕವಿವರಣೆಗಾರ್ತಿ ಅಂಜುಮ್ ಚೋಪ್ರಾ, ಮಾಜಿ ಲಾಂಗ್‌ಜಂಪ್ ಪಟು ಅಂಜು ಬಾಬ್ಬಿ ಜಾರ್ಜ್ ಹಾಗೂ ಟೇಬಲ್ ಟೆನಿಸ್ ಕೋಚ್ ಕಮಲೇಶ್ ಮೆಹ್ತಾ ಅವರಿದ್ದಾರೆ.

ಮೇರಿಕೋಮ್ ಸಕ್ರಿಯ ಅಥ್ಲೀಟ್, ಸರಕಾರದ ಟಾರ್ಗೆಟ್ ಪೋಡಿಯಂ ಸ್ಕೀಮ್(ಟಾಪ್)ಯೋಜನೆಗೆ ಅರ್ಹರಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸ್ಪರ್ಧಿಸುತ್ತಿದ್ದಾರೆ ಎಂಬ ಅಂಶವನ್ನು ಸಮಿತಿ ರಚನೆಯ ವೇಳೆ ಕ್ರೀಡಾ ಸಚಿವಾಲಯ ನಿರ್ಲಕ್ಷಿಸಿದೆ.

  ಮೇರಿ ಕೋಮ್ ಅವರ ದೀರ್ಘಕಾಲದ ವೈಯಕ್ತಿಕ ಕೋಚ್ ಚೋಟೆ ಲಾಲ್ ಯಾದವ್ ದ್ರೋಣಾಚಾರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮೇರಿ ಕೋಮ್ ಶಿಫಾರಸಿನ ಮೇರೆಗೆ ಭಾರತದ ಬಾಕ್ಸಿಂಗ್ ಒಕ್ಕೂಟ ಯಾದವ್ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಿದೆ ಎನ್ನಲಾಗುತ್ತಿದೆ. ಯಾದವ್ ಅರ್ಜಿ ಸಲ್ಲಿಸುವ ಮೂಲಕ ಮೇರಿಕೋಮ್ ಸ್ವಹಿತಾಸಕ್ತಿ ಸಂಘರ್ಷ ಎದುರಿಸುತ್ತಿದ್ದಾರೆ. ಬಾಕ್ಸರ್‌ಗಳಾದ ಗೌರವ್ ಬಿಧುರಿ, ಅಮಿತ್ ಪಾಂಘಾಲ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಸಂಧ್ಯಾ ಗುರಂಗ್ ಹಾಗೂ ಶಿವ ಸಿಂಗ್ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ತನ್ನ ಕೋಚ್ ಯಾದವ್ ಹಾಗೂ ಇತರ ಬಾಕ್ಸರ್‌ಗಳು ಹಾಗೂ ಕೋಚ್‌ಗಳ ಹೆಸರು ಪ್ರಶಸ್ತಿ ಆಯ್ಕೆ ವೇಳೆ ಚರ್ಚೆಗೆ ಬಂದಾಗ ಮೇರಿ ಕೋಮ್ ಸ್ವತಃ ಹಿಮ್ಮೆಟ್ಟಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಸಮಿತಿ ಸದಸ್ಯರು ಇತರ ಸದಸ್ಯರ ಮೇಲೆ ಪ್ರಭಾವ ಬೀರಿದ ನಿದರ್ಶನಗಳು ಸಾಕಷ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News